ಸೋಮವಾರಪೇಟೆ, ಡಿ.೨೬ : ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ೬೦ ಅಂಗಡಿ ಮಳಿಗೆಗಳ ಟೆಂಡರ್ ವಿಚಾರಕ್ಕೆ ಸಂಬAಧಿಸಿದAತೆ ಇಂದು ಪ.ಪಂ. ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲೂ ಜಟಾಪಟಿ ಮುಂದುವರೆದಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಒಮ್ಮತ ಮೂಡದ ಹಿನ್ನೆಲೆ ಅಂತಿಮವಾಗಿ ಜಿಲ್ಲಾಧಿಕಾರಿಗಳಿಗೆ ಮತ್ತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಪ.ಪಂ. ಆಡಳಿತಾಧಿಕಾರಿಯೂ ಆಗಿರುವ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಹಾಗೂ ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಟೆಂಡರ್ ದಿನಾಂಕವನ್ನು ೦೪.೦೧.೨೦೨೪ರಂದು ನಡೆಸಲು ತೀರ್ಮಾನಿಸಿ ಸಭೆಯಲ್ಲಿ ಪ್ರಸ್ತಾಪಿಸಿದ ಸಂದರ್ಭ, ಇದಕ್ಕೆ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿ, ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದರು.

(ಮೊದಲ ಪುಟದಿಂದ) ಅಂತಿಮವಾಗಿ ಸದಸ್ಯರುಗಳ ವಿರೋಧ, ಅಧಿಕಾರಿಗಳ ನಿರ್ಧಾರವನ್ನು ನಿರ್ಣಯಿಸಿ, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಸಭೆಯ ಆರಂಭದಿAದಲೂ ಟೆಂಡರ್ ವಿಚಾರವು ಭಾರೀ ಚರ್ಚೆಗೆ ಒಳಪಟ್ಟಿತು. ಈ ಹಿಂದಿನ ಸಭೆಯಲ್ಲಿ ಟೆಂಡರ್ ಬಗ್ಗೆ ಚರ್ಚೆ ನಡೆದು, ಈಗಿರುವ ವರ್ತಕರುಗಳಿಗೆ ಬಾಡಿಗೆ ಹೆಚ್ಚಿಸಿ ಮತ್ತೆ ಮಳಿಗೆಗಳನ್ನು ನೀಡಬಹುದೇ? ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ಶಾಸಕರ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ತದನಂತರ ನಿರ್ಣಯವನ್ನೇ ತಿದ್ದಿ ಡಿ. ೨೧ಕ್ಕೆ ಟೆಂಡರ್ ಕರೆಯಲಾಗಿತ್ತು. ಸದಸ್ಯರ ಗಮನಕ್ಕೆ ತಾರದೇ ಇಂತಹ ಕ್ರಮ ಕೈಗೊಂಡಿರುವುದು ಸರಿಯಲ್ಲ ಎಂದು ಸದಸ್ಯ ಶುಭಕರ್, ಸಂಜೀವ, ಶೀಲಾ, ಚಂದ್ರು, ಮೃತ್ಯುಂಜಯ ಸೇರಿದಂತೆ ಇತರರು ಹೇಳಿದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ಟೆಂಡರ್‌ಗೆ ದಿನಾಂಕ ನಿಗದಿಗೊಳಿಸಲು ಇಂದಿನ ಸಭೆ ಕರೆಯಲಾಗಿದೆ. ಸದಸ್ಯರುಗಳು ದಿನಾಂಕವನ್ನು ಸೂಚಿಸಬೇಕೆಂದು ಆಡಳಿತಾಧಿಕಾರಿ ನರಗುಂದ್ ಹೇಳಿದರು.

ಈಗಾಗಲೇ ವರ್ತಕರು ಸಂಕಷ್ಟದ ನಡುವೆಯೂ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿದ್ದಾರೆ. ಟೆಂಡರ್ ನಡೆದರೆ ೬೦ ಕುಟುಂಬಗಳು ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳುತ್ತವೆ. ಇದರೊಂದಿಗೆ ಟೆಂಡರ್‌ನಲ್ಲಿ ಮೀಸಲಾತಿ ನಿಗದಿ ಸಮರ್ಪಕವಾಗಿಲ್ಲ. ಈ ಹಿಂದೆ ಎರಡರಿಂದ ಮೂರು ಲಕ್ಷ ಠೇವಣಿ ಸ್ವೀಕರಿಸಿದ್ದು, ಈಗ ಕೇವಲ ೧ ಲಕ್ಷ ಮಾತ್ರ ನಿಗದಿಗೊಳಿಸಲಾಗಿದೆ. ನಿಬಂಧನೆಗಳಲ್ಲೂ ಲೋಪದೋಷಗಳಿವೆ. ಕೆಲವೊಂದು ಅಂಗಡಿ ಮಳಿಗೆಗಳು ಶಿಥಿಲಾವಸ್ಥೆಗೆ ತಲುಪಿವೆ. ಇವುಗಳನ್ನೆಲ್ಲಾ ಪರಿಹರಿಸಿ ನಂತರ ಟೆಂಡರ್ ಮಾಡಲು ಕ್ರಮ ಕೈಗೊಳ್ಳಿ ಎಂದು ಸದಸ್ಯರುಗಳು ಸಲಹೆ ನೀಡಿದರು.

ಇದಕ್ಕೆ ಒಪ್ಪದ ಅಧಿಕಾರಿಗಳು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ ಡಿ.ಡಿ. ತೆಗೆಯಲಾಗಿದೆ. ದಿನಾಂಕ ನಿಗದಿ ಮಾಡಲು ಮಾತ್ರ ಸಭೆ ಕರೆಯಲಾಗಿದೆ ಎಂದು ಒಂದೇ ವಿಚಾರಕ್ಕೆ ಅಂಟಿಕೊAಡಿದ್ದರು.

ಈ ಬಗ್ಗೆ ಚರ್ಚೆಗಳು ನಡೆದು, ಮುಂದಿನ ೨೦೨೪ರ ಡಿಸೆಂಬರ್ ೨೬ಕ್ಕೆ ಟೆಂಡರ್ ನಿಗದಿ ಮಾಡಿ. ಕೊರೊನಾ ಸಂದರ್ಭ ವರ್ತಕರು ಅಂಗಡಿ ಮಳಿಗೆಗಳನ್ನು ಮುಚ್ಚಿದ್ದರೂ ಸಹ ಪಂಚಾಯಿತಿಗೆ ಬಾಡಿಗೆ ಪಾವತಿಸಿದ್ದಾರೆ. ಈಗಲೂ ಹಲವಷ್ಟು ವರ್ತಕರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಅಷ್ಟಾಗಿ ನಡೆಯುತ್ತಿಲ್ಲ. ಮಾನವೀಯತೆಯ ದೃಷ್ಟಿಯಿಂದ ಈಗಿರುವವರಿಗೆ ಮಳಿಗೆಗಳನ್ನು ನೀಡಲು ಕ್ರಮಕೈಗೊಳ್ಳಿ. ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಸಹಿತ ಸರ್ಕಾರಕ್ಕೆ ಕಳುಹಿಸಿ ಎಂದು ಸದಸ್ಯರುಗಳು ಒತ್ತಾಯಿಸಿದರು.

ಇದಕ್ಕೆ ಆಡಳಿತಾಧಿಕಾರಿಗಳು ಒಪ್ಪದೇ ಜನವರಿ ೪ ರಂದು ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು. ಇದಕ್ಕೆ ಮತ್ತೆ ವಿರೋಧ ವ್ಯಕ್ತಪಡಿಸಿದ ಸದಸ್ಯರುಗಳು, ಈಗಿರುವ ಪರಿಸ್ಥಿತಿಯಲ್ಲಿ ಟೆಂಡರ್ ನಡೆಸಲು ಪಟ್ಟಣ ಪಂಚಾಯಿತಿ ಸದಸ್ಯರ ವಿರೋಧವಿದ್ದು, ಎಲ್ಲವನ್ನೂ ಸಮರ್ಪಕಗೊಳಿಸಿದ ನಂತರವಷ್ಟೇ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಿ. ಸದ್ಯಕ್ಕೆ ಟೆಂಡರ್ ರದ್ದುಗೊಳಿಸಿ ಎಂದು ಆಗ್ರಹಿಸಿದರು.

ಇಂದಿನ ಸಭೆಯಲ್ಲಿ ಚರ್ಚಿಸಿ ಟೆಂಡರ್ ದಿನಾಂಕ ನಿಗದಿಗೊಳಿಸುವಂತೆ ಶಾಸಕರು ಸೂಚಿಸಿದ್ದಾರೆ. ಅದರಂತೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ನರಗುಂದ್ ಹೇಳಿದರು. ನಮ್ಮ ಬಳಿಯಲ್ಲೂ ಶಾಸಕರು ಮಾತನಾಡಿದ್ದು, ಟೆಂಡರ್ ಬಗ್ಗೆ ಸದಸ್ಯರುಗಳು ಚರ್ಚಿಸಿ, ಸಭಾ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ನೀವುಗಳು ಏಕಾಏಕಿ ದಿನಾಂಕ ನಿಗದಿ ಮಾಡುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧವಿದೆ. ನಮ್ಮ ವಿರೋಧವನ್ನು ನಿರ್ಣಯಿಸಿ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆಯಿರಿ, ಜಿಲ್ಲಾಧಿಕಾರಿಗಳಿಂದ ಮುಂದಿನ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಿ ಎಂದು ಸದಸ್ಯ ಸಂಜೀವ ಹೇಳಿದರು.

ಈ ಸಂದರ್ಭ ಸದಸ್ಯೆ ಜಯಂತಿ ಶಿವಕುಮಾರ್ ಮತ್ತು ಬಿ.ಆರ್. ಮಹೇಶ್ ಮಾತನಾಡಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಂಗಡಿ ಮಳಿಗೆ ಇಟ್ಟುಕೊಂಡಿರುವ ವರ್ತಕರು ಹಾಗೂ ನೂತನವಾಗಿ ಡಿ.ಡಿ. ತೆಗೆದಿರುವ ಟೆಂಡರ್‌ದಾರರಿಗೆ ಸಮಸ್ಯೆಯಾಗಬಾರದು. ಈ ಹಿನ್ನೆಲೆ ಡಿ.ಡಿ. ಮೌಲ್ಯ ಚಾಲ್ತಿಯಲ್ಲಿರುವ ಮೂರು ತಿಂಗಳ ಒಳಗೆ ಟೆಂಡರ್ ನಡೆಸಿ ಎಂದು ಅಭಿಪ್ರಾಯಿಸಿದರು.

ಅಂತಿಮವಾಗಿ ಆಡಳಿತಾಧಿಕಾರಿಗಳು ಸೂಚಿಸಿದ ಟೆಂಡರ್ ದಿನಾಂಕಕ್ಕೆ ಸದಸ್ಯರುಗಳ ವಿರೋಧ ಮತ್ತು ಟೆಂಡರ್ ಪ್ರಕ್ರಿಯೆ ಮುಂದೂಡಿಕೆ ಹಾಗೂ ಅಂಗಡಿ ಮಳಿಗೆಗಳ ದುರಸ್ತಿ, ಮೀಸಲಾತಿ ನಿಗದಿಗಳ ವಿಚಾರಗಳನ್ನು ನಿರ್ಣಯದಲ್ಲಿ ನಮೂದಿಸಿ ಅಂತಿಮ ತೀರ್ಮಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆ ತೀರ್ಮಾನಿಸಿತು.

೩ ತಿಂಗಳ ಒಳಗೆ ಟೆಂಡರ್ ನಡೆಸಿ ಎಂಬ ಅಭಿಪ್ರಾಯವನ್ನು ಸದಸ್ಯರುಗಳಾದ ಜಯಂತಿ ಶಿವಕುಮಾರ್, ಬಿ.ಆರ್. ಮಹೇಶ್ ಮುಂದಿಟ್ಟರೆ, ಮಾನವೀಯತೆಯ ದೃಷ್ಟಿಯಿಂದ ಕನಿಷ್ಟ ಒಂದು ವರ್ಷಗಳ ಕಾಲ ಈಗಿರುವ ವರ್ತಕರನ್ನೇ ಮುಂದುವರೆಸಿ ಎಂದು ಸದಸ್ಯರುಗಳಾದ ಸಂಜೀವ, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಶುಭಕರ್, ಪಿ.ಕೆ. ಚಂದ್ರು, ಬಿ.ಆರ್. ಮೃತ್ಯುಂಜಯ, ಮೋಹಿನಿ, ಜೀವನ್, ನಾಗರತ್ನ ಅವರುಗಳು ಅಭಿಪ್ರಾಯಿಸಿದರು.

ಒಟ್ಟಾರೆ ಜನವರಿ ೪ ರಂದು ಟೆಂಡರ್ ನಡೆಸಲು ಆಡಳಿತಾಧಿಕಾರಿಗಳು ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸದಸ್ಯರುಗಳ ನಡೆ ಮುಂದೇನು? ಎಂಬ ಕುತೂಹಲ ಮುಂದುವರೆಯುವAತಾಗಿದೆ.