ಸೋಮವಾರಪೇಟೆ, ಡಿ. ೨೬: ಪರಿಶಿಷ್ಟ ಜಾತಿ ಹಾಗೂ ಪಂಗಡ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಸರ್ಕಾರ ವಿನಿಯೋಗಿಸಿದೆ. ಇದರಿಂದ ಪರಿಶಿಷ್ಟ ಜಾತಿಯವರು ಬಡವರಾಗಿಯೇ ಉಳಿಯುವಂತಾಗಿದೆ. ತಕ್ಷಣ ಈ ಅನುದಾನವನ್ನು ವಾಪಸ್ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಜಿಲ್ಲಾ ಸಂಚಾಲಕ ಸಿ.ಸಿ. ಲೋಕೇಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಕ್ಷನ್ ೭ಡಿ.ಯನ್ನು ತೆಗೆದುಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಬೇರೆ ಯೋಜನೆಗೆ ವಿನಿಯೋಗಿಸಿರುವ ಎಸ್‌ಸಿ ಎಸ್‌ಟಿ ಕಲ್ಯಾಣ ಯೋಜನೆಗಳ ಹಣವನ್ನು ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ವಾಪಾಸ್ಸು ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಹೆಚ್ಚಿನ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಬಡತನದಲ್ಲೇ ಬದುಕುತ್ತಿವೆ. ಅಂತಹವರ ಧ್ವನಿಯಾಗಿ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಕೆಲಸ ಮಾಡುತ್ತಿದೆ. ಅನೇಕ ಕುಟುಂಬಗಳಿಗೆ ಇಂದಿಗೂ ವಾಸಕ್ಕೆ ಮನೆಯಿಲ್ಲ. ಗ್ರಾಮೀಣ ಭಾಗದಲ್ಲಿ ಅನೇಕರು ಗುಡಿಸಿಲಿನಲ್ಲೇ ವಾಸಿಸುತ್ತಿದ್ದಾರೆ. ಮನೆಗಳಿಗೂ ವಿದ್ಯುತ್ ಸಂಪರ್ಕವಿಲ್ಲ ಎಂದು ಆರೋಪಿಸಿದರು.

ಪರಿವರ್ತನವಾದ ಸಮಿತಿ ಸಂವಿಧಾನಬದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದೆ. ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಿದೆ. ಮಡಿಕೇರಿಯಲ್ಲಿ ಡಾ.ಅಂಬೇಡ್ಕರ್ ಭವನವನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿಕೊಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನಗಳು ನಿರ್ಮಾಣವಾಗಬೇಕಿದ್ದು, ಈ ನಿಟ್ಟಿನಲ್ಲಿ ಸಮಿತಿ ಹೋರಾಟ ರೂಪಿಸಲಿದೆ ಎಂದು ಹೇಳಿದರು.

ಸೋಮವಾರಪೇಟೆ ಪರಿವರ್ತನವಾದ ತಾಲೂಕು ಸಮಿತಿಯನ್ನು ರಚಿಸಲಾಗಿದ್ದು, ತಾಲೂಕು ಸಂಚಾಲಕರಾಗಿ ಎಸ್.ಆರ್. ಸುಮಂತ್ ಭೀಮ, ಸಂಘಟನಾ ಸಂಚಾಲಕರುಗಳಾಗಿ ಎಸ್.ಎಸ್. ಪ್ರದೀಪ್, ಕೆ.ಕೆ. ವಸಂತ್, ಎಸ್.ಪಿ. ಧನಂಜಯ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಚಾಲಕ ಶಾಹಿದ್ ಖಾನ್, ಜಿಲ್ಲಾ ಸಂಘಟನಾ ಸಂಚಾಲಕ ವಿಜಯಕುಮಾರ್, ಕೆ.ಪಿ. ಶಿವಕುಮಾರ್ ಇದ್ದರು.