ಸೋಮವಾರಪೇಟೆ, ಡಿ. ೨೬: ಮುಂಬರುವ ಚುನಾವಣೆಗಳಿಗೆ ಪಕ್ಷ ಸಜ್ಜುಗೊಳಿಸುವ ದೃಷ್ಟಿಯಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ನಿಡ್ತ, ಗೌಡಳ್ಳಿ, ಹಾಗೂ ದೊಡ್ಡಮಳ್ತೆ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ಶಾಸಕ ಮಂಥರ್ ಗೌಡ ಅವರ ಉಪಸ್ಥಿತಿಯಲ್ಲಿ ವಲಯ ಅಧ್ಯಕ್ಷರುಗಳ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಮಂಥರ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳ ಸದುಪಯೋಗದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದರ ಜೊತೆಗೆ ಯೋಜನೆಗಳಿಂದ ವಂಚಿತರಾದವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅತಿ ಹೆಚ್ಚು ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್, ಪ್ರಮುಖರಾದ ಎಸ್.ಎಂ. ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಚೇತನ್, ಸುರೇಶ ಹಣಕೋಡು ಸೇರಿದಂತೆ ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ಬೂತ್ ಸಮಿತಿ ಅಧ್ಯಕ್ಷರುಗಳು, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು ಭಾಗಿಯಾಗಿದ್ದರು.
ಇದೇ ಸಂದರ್ಭ ಸಾರ್ವಜನಿಕರಿಂದ ಶಾಸಕ ಮಂಥರ್ ಗೌಡ ಅವರು ಅಹವಾಲುಗಳನ್ನು ಸ್ವೀಕರಿಸಿದರು.