ಸೋಮವಾರಪೇಟೆ, ಡಿ. ೨೬: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಕ್ಲಬ್‌ಗೆ, ಕ್ಲಬ್‌ನ ಜಿಲ್ಲಾ-೩೧೮ರ ಜಿಲ್ಲಾಧ್ಯಕ್ಷೆ ಭೇಟಿ ಕಾರ್ಯಕ್ರಮ ಶ್ರೀಗಂಧ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಉದ್ಘಾಟಿಸಿ ಮಾತನಾಡಿ, ಯಾವುದೇ ಕೆಲಸವನ್ನು ಮಾಡಬೇಕಿದ್ದರೂ, ಅದನ್ನು ಒಳ್ಳೆ ಮನಸ್ಸಿನಿಂದ ಮಾಡಿದಲ್ಲಿ ಮಾತ್ರ ಅದು ಯಶಸ್ಸುಗೊಳ್ಳಲು ಸಾಧ್ಯ. ಎಲ್ಲ ಕೆಲಸಗಳಿಗೆ ಹಣವೊಂದೇ ಪ್ರಮುಖವಾಗಿರುವುದಿಲ್ಲ. ಹಣವಿಲ್ಲದೆಯೂ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಬಹುದು. ೨೦೨೪ರ ಜನವರಿಗೆ ಇನ್ನರ್‌ವೀಲ್ ಸಂಸ್ಥೆಗೆ ೧೦೦ ವರ್ಷಗಳನ್ನು ಪೂರೈಸುತ್ತಿರುವುದರಿಂದ ದೆಹಲಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯುವುದು. ಜಿಲ್ಲಾ ಸಂಸ್ಥೆ ವತಿಯಿಂದ ೧೦೦ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಿಗೂ ಸದಸ್ಯರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕ್ಲಬ್ ಅಧ್ಯಕ್ಷೆ ಸಂದ್ಯಾರಾಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ತನ್ಮಯೀ ಪ್ರವೀಣ್ ಇದ್ದರು. ಕಾರ್ಯಕ್ರಮದ ಪ್ರಯುಕ್ತ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿತರಿಸಲಾಯಿತು.