ವೀರಾಜಪೇಟೆ, ಡಿ. ೨೫: ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಹೆಗ್ಗಳ ಗ್ರಾಮದ ಸ್ನೇಹ ಭವನ್ ಮಹಿಳಾ ವೃದ್ಧಾಶ್ರಮಕ್ಕೆ ಗಾಲಿ ಕುರ್ಚಿ ಮತ್ತು ವಾಟರ್ ಫಿಲ್ಟರ್ ವಿತರಣೆ ಮಾಡಲಾಯಿತು.
ಪರಿಕರ ವಿತರಣಾ ಕಾರ್ಯಕ್ರಮದ ಬಳಿಕ ನಗರದ ಮೀನುಪೇಟೆ ಯಲ್ಲಿರುವ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಸಭಾಂಗಣದಲ್ಲಿ ಸರ್ವ ಸದಸ್ಯರ ಮಹಾಸಭೆ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ಅಧ್ಯಕ್ಷ ಪಿ.ಜಿ. ಸುಮೇಶ್ ಈ ಮೊದಲು ಸಂಘವು ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತಿತ್ತು. ಸರ್ವ ಸದಸ್ಯರ ಒಪ್ಪಿಗೆ ಪಡೆದು ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ಎಂದು ಬದಲಾವಣೆಗೊಂಡಿದೆ.
ಓಣಂ ಅಚರಣೆಗೆ ಮಾತ್ರ ಸೀಮಿತವಾಗದೆ ಸಂಘವು ಜನಾಂಗ ಬಾಂಧವರ ಏಳಿಗೆ ಮತ್ತು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ನ ೧೫ ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ಮರಣನಿಧಿ ಸ್ಥಾಪನೆಗಾಗಿ ನೂತನ ಬೈಲ ತಿದ್ದುಪಡಿ ಮಾಡಿಸಿ ಮರಣ ನಿಧಿಯನ್ನು ನೀಡಲಾಗುತ್ತದೆ ಎಂದರು.
ಕಾರ್ಯದರ್ಶಿ ಸಿ.ಆರ್. ಬಾಬು ಅವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿ ಮಾತನಾಡಿ, ಜನವರಿ ೨೧ ರಂದು ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯದ ಏಳನೇ ವರ್ಷದ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮುತ್ತಪ್ಪನ್ ವೆಳ್ಳಾಟಂ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತದೆ ಎಂದರು. ಉಪಾಧ್ಯಕ್ಷ ಸಜೀವನ್ ಸಿ.ಆರ್., ಗೌರವ ಅಧ್ಯಕ್ಷ ಪದ್ಮನಾಭ, ಕೋಶಾಧಿಕಾರಿ ಟಿ.ಆರ್. ಗಣೇಶ್, ಸಹ ಕಾರ್ಯದರ್ಶಿ ರಂಜಿತ್, ಸಲಹೆಗಾರರಾದ ಪಿ.ಜೆ. ವಿಶ್ವನಾಥ್ ಉಪಸ್ಥಿತರಿದ್ದರು. ಮಹಾಸಭೆ ಮತ್ತು ವೃದ್ಧಾಶ್ರಮಕ್ಕೆ ಪರಿಕರ ವಿತರಣಾ ವೇಳೆಯಲ್ಲಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.