ಅಣ್ಣೀರ ಹರೀಶ್ ಮಾದಪ್ಪ

ಶ್ರೀಮಂಗಲ, ಡಿ. ೨೫: ಗೋವುಗಳ ಪಾಲನೆ-ಪೋಷಣೆ, ಹೈನುಗಾರಿಕೆಯಲ್ಲಿ ಮುಂದಿದ್ದ ಕೊಡಗು ಜಿಲ್ಲೆಯಲ್ಲಿ ಗೋಸಂತತಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ೪ ಗಣತಿಯಲ್ಲೂ ಚೇತರಿಕೆ ಇಲ್ಲದೆ ಕುಸಿತ ಕಂಡಿದೆ.

ಮುಂದಿನ ಒಂದೆರಡು ವರ್ಷದಲ್ಲಿ ರಾಜ್ಯದ ೨೧ನೇ ಜಾನುವಾರು ಗಣತಿ ಆರಂಭವಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಸಾಂಪ್ರದಾಯಿಕವಾಗಿ ಗೋ ಸಾಕಣೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೊಡಗಿನಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ೪ ಜಾನುವಾರು ಗಣತಿಯಲ್ಲಿಯೂ ನಿರಂತರ ಕುಸಿತ ದಾಖಲಿಸುತ್ತ ಬಂದಿದ್ದು, ೨೦೦೩ ರ ಗಣತಿಯಲ್ಲಿ ೧,೪೭,೮೩೩ ಇದ್ದ ಗೋವುಗಳ ಸಂಖ್ಯೆ ೨೦೧೯ ರ ಗಣತಿಯಲ್ಲಿ ೭೬,೯೨೦ ಕ್ಕೆ ಇಳಿದು ಶೇ.೨೫ ರಷ್ಟು ಕುಸಿತ ಕಂಡಿದೆ. ಮುಂದಿನ ವರ್ಷ ೨೧ನೇ ಜಾನುವಾರು ಗಣತಿ ಆರಂಭವಾಗಲಿದ್ದು, ಈಗಾಗಲೇ ಲಸಿಕಾ ಕಾರ್ಯಕ್ರಮದಲ್ಲಿ ದೊರೆತಿರುವ ಅಂಕಿ ಅಂಶದ ಪ್ರಕಾರ ಮತ್ತಷ್ಟು ಗೋವುಗಳ ಸಂಖ್ಯೆ ಕುಸಿತವಾಗುವ ಮುನ್ಸೂಚನೆ ದೊರೆತಿರುವುದು ಕಳವಳಕಾರಿ ವಿಚಾರವಾಗಿದೆ.

ಕುಸಿತಕ್ಕೆ ಕಾರಣ

ಜಿಲ್ಲೆಯಲ್ಲಿ ಡೈರಿಗಾಗಿ ಹಾಲು ಉತ್ಪಾದನೆ ಹಾಗೂ ಅದರ ಸಂಗ್ರಹ ಉತ್ತರ ಕೊಡಗಿನ ಕೂಡಿಗೆ, ಕುಶಾಲನಗರ ಸುತ್ತಮುತ್ತಕ್ಕೆ ಸೀಮಿತವಾಗಿದ್ದು, ಇತರ ಭಾಗಗಳಿಗೆ ಡೈರಿಯಿಂದ ಹಾಲು ಸಂಗ್ರಹದ ವ್ಯವಸ್ಥೆ ಇಲ್ಲ. ಇದರಿಂದ ಹಸು ಸಾಕಾಣೆ ಮಾಡಿ ಹಾಲು ಮಾರಾಟದ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳ ಸಾಕಾಣೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇನ್ನೊಂದು ಕಡೆ ವ್ಯವಸಾಯದಲ್ಲಿ ಗದ್ದೆ ಉಳುಮೆ ಮಾಡಲು ಯಂತ್ರೋಪಕರಣಗಳ ಬಳಕೆ ಸಹ ಜಾನುವಾರುಗಳ ಸಾಕಾಣಿಕೆ ಕಡಿಮೆಯಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ ರೈತರು ಸಾಂಪ್ರದಾಯಿಕವಾಗಿ ಪರಂಪರೆಯಿAದ ಸಾಕುತ್ತಿದ್ದ ಜಾನುವಾರುಗಳ ನಿರ್ವಹಣೆ, ಅವುಗಳು ಮೇಯಲು ಸ್ಥಳದ ಅಭಾವ, ಅವುಗಳನ್ನು ನೋಡಿಕೊಳ್ಳಲು ಕಾರ್ಮಿಕರ ಸಮಸ್ಯೆಯಿಂದಲೂ ಜಾನುವಾರುಗಳ ಸಂಖ್ಯೆ ಕುಸಿಯಲು ಕಾರಣ ಎನ್ನಬಹುದಾಗಿದೆ.

(ಮೊದಲ ಪುಟದಿಂದ) ಭತ್ತದ ಗದ್ದೆಗಳನ್ನು ವ್ಯವಸಾಯ ಮಾಡುವುದರಿಂದ ಲಾಭಾಂಶ ಇಲ್ಲ ಎನ್ನುವ ಚಿಂತನೆ ರೈತರಲ್ಲಿ ಮೂಡಿದ್ದು, ಭತ್ತ ವ್ಯವಸಾಯದಿಂದ ವಿಮುಖರಾಗುತ್ತಿರುವುದರಿಂದ ಜಾನುವಾರುಗಳಿಗೆ ಮೇವುಗಳ ಕೊರತೆ ಕಾಣಿಸಿಕೊಂಡು ಭತ್ತದ ವ್ಯವಸಾಯ ಮಾಡದ ರೈತರು ಜಾನುವಾರುಗಳನ್ನು ಸಾಕುವುದನ್ನು ಸ್ಥಗಿತಗೊಳಿಸಿದ್ದಾರೆ. ಭತ್ತದ ಉಳುಮೆ, ಒಕ್ಕಲುಗಳಲ್ಲಿ ಜಾನುವಾರು ಗಳ ಬಳಕೆ ಮಾಡದೇ ಇರುವುದು. ಹುಲಿಗಳ ಹಾವಳಿಯಿಂದ ಗೋವು ಸಂತತಿ ಗಳ ಮೇಲೆ ನಿರಂತರ ದಾಳಿ, ತಮಗೆ ತಾವು ಆಹಾರಕ್ಕಾಗಿ ಭತ್ತ ಬೆಳೆಯುವಾಗ ಆರೋಗ್ಯ ಕಾಳಜಿಯಿಂದ ಸಗಣಿ ಬಳಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲವೂ ವಾಣಿಜ್ಯ ದೃಷ್ಟಿಯಿಂದ ನೋಡುವಂತಾಗಿದ್ದು ರಸಗೊಬ್ಬರ ಬಳಕೆ ಹೆಚ್ಚಾಗಿದೆ. ಮೊದಲೆಲ್ಲ ಭತ್ತದ ವ್ಯವಸಾಯ ಸೇರಿದಂತೆ ಕಾಫಿ ತೋಟಗಳಿಗೆ ರಸಗೊಬ್ಬರ ಬಳಕೆ ತೀರ ವಿರಳವಾಗಿತ್ತು. ಜಾನುವಾರುಗಳಿಂದ ತಯಾರಿಸಿದ ಸಗಣಿ ಗೊಬ್ಬರ ಅಥವಾ ಕಾಂಪೋಸ್ಟ್ಗಳನ್ನು ಪರ್ಯಾಯವಾಗಿ ಬಳಸಲಾಗುತ್ತಿತ್ತು. ಆದರೆೆ ಎರಡು ದಶಕಗಳಿಂದ ರಸಗೊಬ್ಬರ ಬಳಕೆ ತೀವ್ರವಾಗಿ ಹೆಚ್ಚಳವಾಗಿದ್ದು, ಜಾನುವಾರುಗಳ ಸಾಕಾಣಿಕೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ.

ಭತ್ತದ ಬೆಳೆ ಕಟಾವು ನಂತರ ಆ ಜಾಗದಲ್ಲಿ ಸ್ವಚ್ಛಂದವಾಗಿ ಜಾನುವಾರುಗಳು ಬೇಸಿಗೆಯಿಡೀ ಮೇಯುತ್ತಿದ್ದವು. ಮಳೆಗಾಲಕ್ಕೆ ಭತ್ತದ ಕೃಷಿಯಿಂದ ಬಂದ ಹುಲ್ಲನ್ನು ಒಣಗಿಸಿ ಹುಲ್ಲು ಮುಂಡ ನಿರ್ಮಿಸಿ ಆಹಾರ ದಾಸ್ತಾನು ಇಡಲಾಗುತ್ತಿತ್ತು. ಇಂತಹ ಫಲವತ್ತಾದ ಗದ್ದೆಗಳು ಲೇಔಟ್ ಮತ್ತು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತನೆ, ಇದರೊಂದಿಗೆ ನಗರೀಕರಣ ಕೃಷಿಗಿಂತ ವೇಗವಾಗಿ ಆದಾಯ ಗಳಿಸುವ ನಿಲುವಿ ನಿಂದ ಗೋ ಸಂತತಿ ಅವನತಿಗೆ ಕಾರಣವಾಗಿದೆ. ಕೊಡಗಿನಲ್ಲಿ ಪ್ರತೀ ಮನೆಗಳಲ್ಲಿ ಜಾನುವಾರುಗಳನ್ನು ಸಾಕುವ ಪದ್ಧತಿ-ಪರಂಪರೆಯಿAದ ಬೆಳೆದು ಬಂದಿತ್ತು. ದನ, ಹಸು, ಕರುಗಳು ಕೃಷಿಕನ ಬದು ಕಿನ ಅವಿಭಾಜ್ಯ ಅಂಗವಾಗಿತ್ತು. ಬೆಳಿಗ್ಗೆ ಎದ್ದೊಡನೆ ಮನೆಯ ಹಿರಿಯರು ಹಾಗೂ ಮಕ್ಕಳು ಜಾನುವಾರುಗಳ ಮುಖವನ್ನು ನೋಡುವ ಪರಿಪಾಠ ಬೆಳೆದುಕೊಂ ಡಿತ್ತು. ಗೋವುಗಳು ಪವಿತ್ರ ಎನ್ನುವ ಭಾವನೆಯಿಂದ ಸಾಕಲಾಗುತ್ತಿತ್ತು. ಜಾನು ವಾರುಗಳ ಸಂಖ್ಯೆ ಹೆಚ್ಚಿರುವವರು ಹಿಂದಿನ ಕಾಲದಲ್ಲಿ ಶ್ರೀಮಂತರು ಎನ್ನುವ ಭಾವನೆಯೂ ಇತ್ತು. ಪ್ರತೀ ಮನೆಗಳಲ್ಲಿ ಅವಿಭಕ್ತ ಕುಟುಂಬ ಅಂದರೆ ಪ್ರತೀ ಮನೆ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆಲೆಸಿದ್ದರಿಂದ ಹಾಗೂ ಪಟ್ಟಣದ ಸಂಪರ್ಕ ದೂರವಿದ್ದ ಕಾರಣ ಮನೆ ಯಲ್ಲಿಯೇ ಹಸು ಸಾಕಣೆ ಮಾಡಿ ಹಾಲು, ಮೊಸರು ಇತರ ಹಾಲಿನ ಉತ್ಪನ್ನಗಳನ್ನು ಆರೋಗ್ಯಕ್ಕಾಗಿ ಉತ್ಪಾ ದಿಸಿಕೊಳ್ಳುತ್ತಿದ್ದರು. ದನ, ಕರುಗಳು ಇರುವ ಮನೆಯ ಅದೃಷ್ಟ ಎನ್ನುವ ಭಾÀವನೆಯೂ ಇತ್ತು. ಆದರೆ ಆಧುನಿಕತೆ ಬೆಳೆದಂತೆ ಜಾನುವಾರುಗಳ ಸಾಕಾಣೆ ಕ್ಷೀಣವಾಗತೊಡಗಿದೆ. ಪ್ರತೀ ಕಾರ್ಮಿ ಕರಿಗೆ ನಿತ್ಯ ಕೂಲಿ ನೀಡಿ ೨-೩ ಹಸು ಗಳನ್ನು ಸಾಕುವುದಕ್ಕಿಂತ ಲೀಟರ್‌ಗೆ ೪೦-೫೦ ನೀಡಿ ಪ್ಯಾಕೆಟ್ ಹಾಲು ಖರೀದಿಸುವುದೇ ಲಾಭ ಎನ್ನುವ ಧೋರಣೆÉ ಕೃಷಿಕರಲ್ಲಿದೆ.

ಹಂದಿ ಸಾಕಾಣಿಕೆಯಲ್ಲೂ ಕುಸಿತ: ಜಿಲ್ಲೆ ಸಾಂಪ್ರದಾಯಿಕವಾಗಿ ಹಂದಿ ಸಾಕಾಣಿಕೆಗೆ ಪ್ರಸಿದ್ಧಿಯಾಗಿತ್ತು. ಮಾಂಸ ಮತ್ತು ಮರಿಗಳನ್ನು ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದರು. ಆದರೆ ಭತ್ತದ ಗದ್ದೆಗಳು ಪಾಳು ಬಿಟ್ಟ ಅಥವಾ ಕೃಷಿ ಯೇತರ ಉದ್ದೇಶಕ್ಕೆ ಬಳಕೆಯಾದಂತೆ ಅವುಗಳ ಆಹಾರ ಪೂರೈಕೆ ದುಬಾರಿಯಾದಂತೆ ಹಂದಿ ಸಾಕಾಣಿಕೆ ಗಣನೀಯವಾಗಿ ಕುಂಠಿತಗೊAಡಿದೆ. ೨೦೧೨ ರಲ್ಲಿ ೧೬,೯೪೮ ರಷ್ಟಿದ್ದದ್ದು ೨೦೧೯ ರಲ್ಲಿ ೮,೩೬೫ಕ್ಕೆ ಇಳಿಯುವ ಮೂಲಕ ಶೇ.೪೯ ರಷ್ಟು ಕುಸಿತಕಂಡಿದೆ.

ನಾಯಿಗಳ ಮೇಲೆ ಹೆಚ್ಚಿದ ಪ್ರೀತಿ

ಜಿಲ್ಲೆಯ ಜನತೆ ನಾಯಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಬಹುತೇಕ ಮನೆಗಳಲ್ಲಿಯೂ ಸಾಕುನಾಯಿಗಳು ಕಂಡು ಬರುತ್ತವೆ. ೨೦೧೨ ರಲ್ಲಿ ೪೭೧೩೦ ಇದ್ದ ಸಂಖ್ಯೆ ೨೦೧೯ ರ ಗಣತಿಯಲ್ಲಿ ೫೩೬೩೬ಕ್ಕೆ ಏರಿಕೆಯಾಗುವುದರ ಮೂಲಕ ಶೇ.೧೨ ರಷ್ಟು ಏರಿಕೆ ಯಾಗಿದೆ.