ಪ್ರತ್ಯಕ್ಷ ವರದಿ -ಚಂದ್ರಮೋಹನ್
ಕುಶಾಲನಗರ, ಡಿ. ೨೫: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಗಾರರ ದಂಧೆ ಮಿತಿಮೀರಿದ್ದು ಕಾಫಿ ತೋಟಗಳಲ್ಲಿ ಬೆಲೆಬಾಳುವ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿರುವುದು ಮುಂದುವರೆದಿದೆ.
ಕೊಡಗರಹಳ್ಳಿ ಬಳಿ ಸಾವಿರಾರು ಮರ ನಾಶ ಮಾಡಿದ್ದರೆ, ಇತ್ತ ಸಮೀಪದ ಹೊಸಕೋಟೆ ಬಳಿ ಅಂದಗೋವೆ ಗ್ರಾಮದ ಕಾಫಿ ತೋಟ ಒಂದರಲ್ಲಿ ಎರಡು ಎಕರೆ ಜಾಗದಲ್ಲಿ ಹಲವು ಮರಗಳನ್ನು ನಾಶಗೊಳಿಸಲಾಗಿದೆ.
ಹೊಸಕೋಟೆ ಗಣಪತಿ ದೇವಾಲಯದ ಬಳಿ ಅಂದಗೋವೆ ಗ್ರಾಮದಲ್ಲಿ ಈ ಪ್ರಕರಣ ಗೋಚರಿಸಿದ್ದು, ಕಾಫಿ ಗಿಡಗಳನ್ನು ತೆರೆವು ಮಾಡಿ ಇಡೀ ಪ್ರದೇಶ ನೆಲಸಮ ಮಾಡಿ ಶುಂಠಿ ಬೆಳೆಯಲು ಸಿದ್ಧತೆ ನಡೆದಿದೆ. ಈ ತೋಟದಲ್ಲಿದ್ದ ಹಲಸು, ಮತ್ತಿ, ನಂದಿ ಮತ್ತಿತರ ಮರಗಳ ಕೊಂಬೆಗಳನ್ನು ನಾಶಪಡಿಸಲಾಗಿದ್ದು, ಉಳಿದಂತೆ ಕೆಲವು ಮರಗಳನ್ನು ಉರುಳಿಸಿರುವ ದೃಶ್ಯ ಕಂಡು ಬಂದಿದೆ. ಖಾಸಗಿ ವ್ಯಕ್ತಿಯೊಬ್ಬರ ತೋಟದಲ್ಲಿ ಕಾಫಿ ಗಿಡ ತೆರವುಗೊಳಿಸಿ ಶುಂಠಿ ಬೆಳೆಯುವ ಸಿದ್ಧತೆ ನಡೆದಿದೆ.
ಕಳೆದ ಎರಡು ವಾರಗಳಲ್ಲಿ ಈ ಮರ ತೆರವು ಕಾರ್ಯ ನಡೆದಿದ್ದು ಕೊಡಗರಹಳ್ಳಿಯಲ್ಲಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಫಿ ತೋಟದ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿದು ಬಂದಿದೆ ಸುಂಟಿಕೊಪ್ಪದ ವ್ಯಕ್ತಿ ಒಬ್ಬರು ಈ ಕಾಫಿ ತೋಟದಲ್ಲಿ ಶುಂಠಿ ಬೆಳೆಯುವ ಕೆಲಸಕ್ಕೆ ತಯಾರಿ ನಡೆಸಿರುವುದಾಗಿ ಸ್ಥಳೀಯರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆಯ ಬದಿಯಲ್ಲಿಯೇ ಈ ಮರ ಹನನ ಕಾರ್ಯಾಚರಣೆ ನಡೆದರೂ ಅರಣ್ಯ ಇಲಾಖೆಯ ಗಮನಕ್ಕೆ ಬರದಿರುವುದು ಸ್ಥಳೀಯರಲ್ಲಿ ಸಂಶಯಕ್ಕೆ ಎಡೆ ಮಾಡಿದೆ.
ಶುಂಠಿ ಬೆಲೆ ಗಗನಕ್ಕೇರಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದ್ದು ಜಿಲ್ಲೆಯ ಕಾಫಿ ತೋಟಗಳಲ್ಲಿ ಬೆಳೆದು ನಿಂತ ಭಾರಿ ಮೌಲ್ಯದ ಬೆಲೆಬಾಳುವ ಮರಗಳನ್ನು ಬೇರು ಸಹಿತ ಕಿತ್ತುಹಾಕಿ ಅಕ್ರಮವಾಗಿ ಮರದ ಮಿಲ್ಲುಗಳಿಗೆ ನೆರೆಯ ಜಿಲ್ಲೆಗಳಿಗೆ ಟಿಂಬರ್ ಸಾಗಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಒಟ್ಟಾರೆ ಸುಂಟಿಕೊಪ್ಪ ಹೋಬಳಿಯಲ್ಲಿ ಶುಂಠಿ ಬೆಳೆಗಾರರ ಹೆಸರಿನಲ್ಲಿ ಜಿಲ್ಲೆಯ ಕಾಫಿ ತೋಟಗಳಲ್ಲಿ ಬೆಳೆದು ನಿಂತಿರುವ ಮರಗಳು ಹನನವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.