ಸುಂಟಿಕೊಪ್ಪ, ಡಿ. ೨೪: ಶಾಲೆಯ ಹೂವಿನ ಗಿಡಗಳು ಆಡು ದನ ಕರುಗಳ ಪಾಲಾಗುತ್ತಿದೆ. ಕುಡಿಯಲು ಶುದ್ಧ ನೀರು ಕೊಡಿ, ಹೆದ್ದಾರಿಯಲ್ಲಿ ದಾಟಲು ಜೀಬ್ರಾ ಕ್ರಾಸ್ ಅಳವಡಿಸಿ, ಹಾನಿಗೊಳ್ಳುತ್ತಿರುವ ಕುಡಿಯುವ ನೀರಿನ ಟ್ಯಾಪ್, ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳ ನಿಲುಗಡೆಯ ಸಮಸ್ಯೆ, ಶಾಲಾ ಅವಧಿಯ ವೇಳೆ ಮೈದಾನಕ್ಕೆ ಸಾರ್ವಜನಿಕರು ಆಗಮಿಸುವುದನ್ನು ತಡೆಹಿಡಿಯಿರಿ, ಶಾಲೆ ಬಿಡುವ ವೇಳೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸುವಂತೆ ಸುಂಟಿ ಕೊಪ್ಪ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ಆಗ್ರಹಿಸಿದರು.

ಗುರುವಾರದಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.

ಸಭೆಯಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಹಮದ್ ಆರಫನ್ ಮಾತನಾಡಿ ಶಾಲೆಯಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಇಲ್ಲದಿದ್ದು ಒದಗಿಸಿ ಕೊಡುವಂತೆ ಆಗ್ರಹಿಸಿದರು. ಸರಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕೃತಿಕ ಶಾಲೆಯ ಮುಂಭಾಗದಲ್ಲಿ ಸುಂದರವಾದ ಹೂತೋಟವನ್ನು ಮಾಡಲಾಗಿದ್ದು ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಠಪ್ರವಚನದ ಸಂದರ್ಭದಲ್ಲಿ ತೋಟವನ್ನು ಆಡು, ದನ ಕರುಗಳಿಂದ ರಕ್ಷಿಸುವ ಕಾಯಕದಲ್ಲಿ ತೊಡಗಿಸಿ ಕೊಳ್ಳುವಂತಾಗಿದೆ. ಇದರಿಂದ ನಮಗೆ ಪಾಠ ಪ್ರವಚನ ಕೇಳಲು ಕಷ್ಟಸಾಧ್ಯ, ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರೋಜ ಎಂ. ಸುಂಟಿಕೊಪ್ಪ ಪಟ್ಟಣದ ನಡುವೆ ರಾಜ್ಯ ಹೆದ್ದಾರಿ ಹಾಗೂ ರಾಷ್ಟಿçÃಯ ಹೆದ್ದಾರಿ ಹಾದು ಹೋಗಿದ್ದು ನಾವು ಹೆದ್ದಾರಿಯನ್ನು ದಾಟಬೇಕಾದರೆ ವಾಹನಗಳ ವೇಗ ಹಾಗೂ ದಟ್ಟನೆ ಹೆಚ್ಚಾಗಿದ್ದು ಕನ್ನಡ ವೃತ್ತದ ಬಳಿ ಜೀಬ್ರಾಕ್ರಾಸ್ ಅಳವಡಿಸು ವಂತೆ ಕೋರಿಕೊಂಡರು. ಪ್ರಾಥಮಿಕ ಶಾಲೆಯ ಟ್ಯಾಪ್ ಸೋಮವಾರ ದಿಂದ ಶನಿವಾರದವರೆಗೆ ಸುಸ್ಥಿತಿ ಯಲ್ಲಿರುತ್ತದೆ. ಶನಿವಾರ ಭಾನುವಾರ ದಂದು ಟ್ಯಾಪ್ ದುಸ್ಥಿತಿಯಲ್ಲಿರುತ್ತದೆ ಎಂದರು.

ಮಹಮದ್ ಆಜ್ಮಲ್ ಶಾಲಾ ವಠಾರದಲ್ಲಿ ವಾಹನಗಳನ್ನು ಕ್ರಮ ಬದ್ದವಾಗಿ ನಿಲ್ಲಿಸದೆ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಅಲ್ಲದೆ ಶಾಲಾ ಗೇಟ್ ಮುಂಭಾಗದಲ್ಲಿ ವಾಹನಗಳನ್ನು ತಂದು ನಿಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು. ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನ ಸಾರ್ವಜನಿಕರು ಶಾಲಾ ಸಮಯದಲ್ಲಿ ಮೈದಾನಕ್ಕೆ ಆಗಮಿಸುತ್ತಿದ್ದಾರೆ ಎಂದರು. ಗದ್ದೆಹಳ್ಳದ ಸ.ಹಿ.ಪ್ರಾ. ಶಾಲಾ ದಿಕ್ಷೀತ್ ಶಾಲೆಗೆ ನೀರಿನ ಸೌಲಭ್ಯವಿಲ್ಲ. ಪಕ್ಕದ ವಿದ್ಯಾರ್ಥಿ ನಿಲಯ ಅಥವಾ ಸಮೀಪದ ಮನೆಗಳಿಂದ ನೀರು ತರುವಂತಾಗಿದೆ. ಕೂಡಲೇ ನೀರಿನ ಸೌಲಭ್ಯ ಒದಗಿಸಿ ಎಂದು ಕೋರಿದರು. ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ. ಶ್ರೀಧರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತೆ ಜಯಶ್ರೀ ಮಾತನಾಡಿದರು.

ಮಕ್ಕಳ ಗ್ರಾಮಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಉದ್ಘಾಟಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರಾಸ್ತಾವಿಕ ಭಾಷಣ ಮಾಡಿ ಮಕ್ಕಳ ಗ್ರಾಮಸಭೆಯ ಮಹತ್ವ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ.ಎಫ್. ಸೆಬಾಸ್ಟಿಯನ್, ಜೀನಾಸುದ್ದೀನ್, ರಫೀಕ್ ಖಾನ್, ಗೀತಾ, ರೇಷ್ಮ, ಕಾಲೇಜಿನ ಪ್ರಾಂಶುಪಾಲೆ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಅರುಳ್ ಸೆಲ್ವಕುಮಾರ್, ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ, ಮೇಲ್ವಿಚಾರಕರು ಮಕ್ಕಳ ಸಹಾಯವಾಣಿ ಘಟಕ ನಿಮಾ ತಂಗಚ್ಚನ್ ಮತ್ತಿತರರು ಇದ್ದರು.