ಸೋಮವಾರಪೇಟೆ, ಡಿ. ೨೪: ಇಲ್ಲಿನ ಪೊಲೀಸ್ ಠಾಣೆಯ ವತಿಯಿಂದ ಚೌಡ್ಲು ಗ್ರಾಮದ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನಕ್ಕೆ ಬೇಕಾದ ಕನಿಷ್ಟ ಕಾನೂನನ್ನು ಅರಿತಿರಬೇಕು. ಎಲ್ಲರೂ ಚಾಲನಾ ಪರವಾನಗಿ ಪಡೆದ ನಂತರವಷ್ಟೇ ವಾಹನ ಚಾಲನೆ ಮಾಡಬೇಕು. ತಪ್ಪಿದಲ್ಲಿ ಕಾನೂನಿನಡಿಯಲ್ಲಿ ಪೋಷಕರು ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದರು.
ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಸಮಾಜದಲ್ಲಿನ ಘಟನಾವಳಿಗಳ ಬಗ್ಗೆ ಜಾಗೃತಿ ವಹಿಸಬೇಕು. ಅಪರಾಧ ಪ್ರಕರಣಗಳು ಕಂಡುಬAದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರಲ್ಲದೆ, ಕಾನೂನು ಉಲ್ಲಂಘನೆಯಾದರೆ ಕಾನೂನು ಪ್ರಕಾರ ಎದುರಿಸಬೇಕಾದ ಶಿಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ಮಹಾದೇವಮ್ಮ ವಹಿಸಿದ್ದರು. ಪೊಲೀಸ್ ಇಲಾಖೆ ಸಿಬ್ಬಂದಿ ಬಸಪ್ಪ ಹಾಗೂ ಶಾಲೆಯ ಸಹ ಶಿಕ್ಷಕಿಯರು ಹಾಜರಿದ್ದರು.