ಸಿದ್ದಾಪುರ, ಡಿ ೨೪: ವಿದ್ಯುತ್ ಸಂಪರ್ಕವನ್ನೇ ಕಾಣದ ದುಬಾರೆ ಹಾಡಿಗೆ ಹಲವು ವರ್ಷಗಳ ಬಳಿಕ ಬೆಳಕಿನ ಭಾಗ್ಯ ದೊರೆತಿದೆ. ಸತತ ಒತ್ತಾಯ ಮಾಡಿದ ಪರಿಣಾಮ ಬೇಡಿಕೆಗೆ ಮನ್ನಣೆ ದೊರೆತ್ತಿದ್ದು, ಸದ್ಯದಲ್ಲಿಯೇ ಹಾಡಿಯ ಮನೆಗಳಿಗೆ ಸಂಪರ್ಕ ದೊರೆಯಲಿದೆ.
ಐಟಿಡಿಪಿ ಇಲಾಖೆಯ ಅನುದಾನ ದಲ್ಲಿ ಈಗಾಗಲೇ ಮೀಟರ್, ಕಂಬ ಗಳ ಅಳವಡಿಕೆ ಕಾರ್ಯ ತ್ವರಿತಗತಿ ಯಲ್ಲಿ ನಡೆಯುತ್ತಿದ್ದು, ಸಂಪರ್ಕ ನೀಡುವುದು ಬಾಕಿ ಉಳಿದಿದೆ. ಹಾಡಿಯಲ್ಲಿ ೪೦ ಮನೆಗಳಿದ್ದು, ೭೨ ಕುಟುಂಬಗಳು ವಾಸಿಸುತ್ತಿವೆ. ಇದುವರೆಗೂ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಪಕ್ಕದಲ್ಲಿಯೇ ಇರುವ ಶಾಲೆಯೂ ವಿದ್ಯುತ್ನಿಂದ ವಂಚಿತವಾಗಿತ್ತು.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ದುಬಾರೆ ಹಾಡಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಸಮಸ್ಯೆಯಲ್ಲಿದ್ದರು. ಸೀಮೆಎಣ್ಣೆ ದೀಪದಲ್ಲಿ ಬೆಳಕನ್ನು ಆಶ್ರಯಿಸಿದ್ದ ಜನ, ಬದಲಾದ ಕಾಲಘಟ್ಟದಲ್ಲಿ ಸೀಮೆಎಣ್ಣೆ ದೊರೆಯದ ಹಿನ್ನೆಲೆ ಇಂಧನ ಬಳಸಿ ಬೆಳಕು ಪಡೆಯುತ್ತಿದ್ದರು. ವನ್ಯಜೀವಿ ಉಪಟಳದ ನಡುವೆ ರಾತ್ರಿ ಓಡಾಡಲೂ ಭಯದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಹಲವು ವರ್ಷಗಳ ಬೇಡಿಕೆ
ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕ ಒದಗಿಸುವಂತೆ ಇಲ್ಲಿನ ಜನತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಅಂಗಲಾಚುತ್ತಿದ್ದರು.
ಈವರೆಗೂ ದುಬಾರೆ ಹಾಡಿಗೆ ವಿದ್ಯುತ್ ಸಂಪರ್ಕ ಒದಗಿಸಲು ಪ್ರಯತ್ನಗಳಿಗೆ ಯಾರೂ ಕೈಹಾಕಿರಲಿಲ್ಲ. ಏನಾದರೂ ಒಂದು ಕಾರಣ ಹೇಳಿ ವಿದ್ಯುತ್ ಸಂಪರ್ಕವನ್ನು ನಿರಾಕರಣೆ ಮಾಡಲಾಗುತ್ತಿತ್ತು. ಹಾಡಿಯಲ್ಲಿರುವ ವಿದ್ಯಾರ್ಥಿಗಳಿಗೂ ವಿದ್ಯುತ್ ಇಲ್ಲದೆ ಕಲಿಕಾ ಚಟುವಟಿಕೆ ಸಮಸ್ಯೆಯಾಗುತ್ತಿತ್ತು. ಹಲವು ವರ್ಷಗಳಿಂದ ಮರೀಚಿಕೆಯಾಗಿದ್ದ ಬೇಡಿಕೆಗೆ ಇದೀಗ ಮನ್ನಣೆ ದೊರೆತ್ತಿರುವುದು ಜನರ ಸಂಭ್ರಮಕ್ಕೆ ಕಾರಣವಾಗಿದೆ.
ಶಾಸಕ ಪೊನ್ನಣ್ಣ ಮುತುವರ್ಜಿ
ಸಮಸ್ಯೆ ಕುರಿತು ಹಾಡಿ ನಿವಾಸಿಗಳು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಗಮನ ಸೆಳೆದ ಸಂದರ್ಭ ಸಂಬAಧಪಟ್ಟವರನ್ನು ಸಂಪರ್ಕಿಸಿ ಕ್ರಮಕ್ಕೆ ಮುಂದಾದರು.
ಠೇವಣಿ ಹಣ ರೂ. ೬.೫೦ ಲಕ್ಷವನ್ನು ಪಾವತಿಸಿ, ವಿದ್ಯುತ್ ಸಂಪರ್ಕ ಕೆಲಸಕ್ಕೆ ಮುನ್ನುಡಿ ಇಡಲಾಗಿದೆ.
ದುಬಾರೆಯ ಹಾಡಿಯ ಹಿರಿಯರಾದ ಜೆ.ಕೆ ಡೋಬಿ ಮಾತನಾಡಿ, ಶತಮಾನಗಳಿಂದ ದುಬಾರೆ ಹಾಡಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲೇ ದಿನದೂಡುತ್ತಿದ್ದೇವೆ. ಎ.ಎಸ್ ಪೊನ್ನಣ್ಣ ಅವರ ಸÀತತ ಪ್ರಯತ್ನದಿಂದ ದುಬಾರೆ ಹಾಡಿಯ ನಿವಾಸಿಗಳಿಗೆ ವಿದ್ಯುತ್ ಲಭಿಸಿದೆ. ಈಗಾಗಲೇ ವಿದ್ಯುತ್ ಸಂಪರ್ಕದ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಇದಾದ ಬಳಿಕ ಎ.ಎಸ್ ಪೊನ್ನಣ್ಣ ಅವರ ಮೂಲಕ ಉದ್ಘಾಟಿಸಲಾಗುವುದೆಂದು ಮಾಹಿತಿ ನೀಡಿದರು.