ಐಗೂರು, ಡಿ. ೨೨: ಅರೆಭಾಷೆಯ ಸಂಸ್ಕೃತಿ, ಆಚಾರ, ವಿಚಾರ ಉಳಿಯ ಬೇಕಾದರೆ ಜನಾಂಗ ಬಾಂಧವರು ಮನೆಯಿಂದಲೇ ಭಾಷೆಯನ್ನು ಮಾತಿನ ಮೂಲಕ ಬೆಳೆಸುವ ಕ್ರಮವನ್ನು ರೂಢಿಸಿಕೊಳ್ಳಬೇಕೆಂದು ಸಮಾಜದ ಗೌರವಾಧ್ಯಕ್ಷರೂ, ವಕೀಲರು ಆದ ಪೊನ್ನಚ್ಚನ ಗಣಪತಿ ಅವರು ಕರೆ ನೀಡಿದರು.
ಐಗೂರಿನ ಅರೆಭಾಷೆ ಗೌಡ ಸಮಾಜದ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಅರೆಭಾಷಿಕರ ಭಾಷೆ, ವಾಸಿಸುವ ಸ್ಥಳ, ಪ್ರಾಂತ್ಯ, ಸೀಮೆಗಳ ಭೌಗೋಳಿಕ ವಾತಾವರಣ, ಸ್ಥಳೀಯ ಭಾಷೆಗಳ ಪ್ರಭಾವದಿಂದ ಶಬ್ದಗಳ ಬಳಕೆ ಮತ್ತು ಜೀವನ ಶೈಲಿಯನ್ನು ವಿವರಿಸಿದರು.
ಮುಖ್ಯ ಅತಿಥಿಗಳಾದ ಪೆರ್ಲಾಡಿ ಚೆಂಗಪ್ಪ ಅವರು ಅರೆಭಾಷೆಯ ಉಗಮ ಮತ್ತು ಮಾತೃಭಾಷೆಯ ಮಹತ್ವವನ್ನು ವಿವರಿಸಿ ಜನಾಂಗದ ಸಂಸ್ಕೃತಿಯನ್ನು ಉಳಿಸಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಬಾರನ ಭರತ್ ಕುಮಾರ್ ಮಾತನಾಡಿ, ಅರೆಭಾಷೆ ಅಕಾಡೆಮಿಯ ಉಗಮ ಮತ್ತು ಅದಕ್ಕೆ ಕಾರಣಕರ್ತರಾದವರನ್ನು ಸ್ಮರಿಸಿದರು. ಮಕ್ಕಳಿಗೆ ಮನೆಯಿಂದಲೇ ಭಾಷೆಯ ಸಂಸ್ಕೃತಿಯ ಬಗ್ಗೆ ಕಲಿಸಬೇಕೆಂದು ತಿಳಿಸಿದರು. ಕಾಳೇರಮ್ಮನ ಶಾಲಿನಿರಾಯ್ ಪ್ರಾರ್ಥಿಸಿದರು. ಉಪಾಧ್ಯಕ್ಷ ನಂಗಾರು ಗಿರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಮೂಲೆಮಜಲು ಕಾಳಪ್ಪ, ಕಾರ್ಯದರ್ಶಿ ಪೊನ್ನಚ್ಚನ ತೇಜಕುಮಾರ್, ಖಜಾಂಚಿ ಕೂಡಕಂಡಿ ಧೀರಜ್, ನಿರ್ದೇಶಕರು ಮತ್ತು ಜನಾಂಗ ಬಾಂಧವರು ಭಾಗವಹಿಸಿದ್ದರು.