ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು ಅಂಗೀಕಾರ
ನವದೆಹಲಿ, ಡಿ. ೨೦: ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಇಂದು ಹೊಸ ಮೂರು ಕ್ರಿಮಿನಲ್ ಕಾನೂನುಗಳ ಮಸೂದೆಗಳಿಗೆ ಅಂಗೀಕಾರ ದೊರೆತಿದೆ. ಭಾರತೀಯ ನ್ಯಾಯ ಸಂಹಿತೆ ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಮತ್ತು ಭಾರತೀಯ ಸಾಕ್ಷö್ಯ ಅಧಿನಿಯಮ ೨೦೨೩ ಮಸೂದೆಗಳಿಗೆ ಅಂಗೀಕಾರ ದೊರೆತಿದೆ. ಭಾರತೀಯ ದಂಡ ಸಂಹಿತೆ ೧೮೬೦, ಕ್ರಿಮಿನಲ್ ಪ್ರೊಸೀಜರ್ ೧೯೭೩ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್, ೧೮೭೨ ಬದಲಾಯಿಸಿ ಹೊಸ ಮಸೂದೆ ಮಂಡಿಸಲಾಗಿದೆ. ಭದ್ರತಾ ಉಲ್ಲಂಘನೆ ವಿಚಾರದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ೧೪೩ ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ ಬಳಿಕ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಮಸೂದೆಗಳನ್ನು ಅಂಗೀಕರಿಸಲಾಯಿತು. ಬುಧವಾರ ಲೋಕಸಭೆಯಲ್ಲಿ ಮಸೂದೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅಮಿತ್ ಶಾ, ಹೊಸ ಮಸೂದೆಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಒತ್ತು ನೀಡುತ್ತವೆ ಎಂದು ಹೇಳಿದರು.
ಅಮಿತ್ ಷಾರನ್ನು ಭೇಟಿಯಾದ ಸಿದ್ದರಾಮಯ್ಯ
ನವದೆಹಲಿ, ಡಿ. ೨೦: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಕೃತಿ ವಿಕೋಪ ಕುರಿತಂತೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಕೂಡಲೇ ಕರೆದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ೨೩೬ ತಾಲೂಕುಗಳಲ್ಲಿ ೨೨೩ ತಾಲೂಕುಗಳು ಬರ ಪೀಡಿತವಾಗಿವೆ. ಸುಮಾರು ೪೮.೧೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ರೈತರು, ಅದರಲ್ಲೂ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಬರ ಪರಿಹಾರ ಬಿಡುಗಡೆಗಾಗಿ ಮೊದಲ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳು ಕಳೆದಿದೆ. ಆದ್ದರಿಂದ ಕೂಡಲೇ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ, ರೂ. ೧೮,೧೭೭.೪೪ ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದರಲ್ಲಿ ರೂ. ೪೬೬೩.೧೨ ಕೋಟಿ ಇನ್ಪುಟ್ ಸಬ್ಸಿಡಿ, ರೂ. ೧೨,೭೫೭೭.೮೬ ಕೋಟಿ ತುರ್ತು ಪರಿಹಾರ, ರೂ. ೫೬೬.೭೮ ಕೋಟಿ ಕುಡಿಯುವ ನೀರಿಗಾಗಿ ಹಾಗೂ ರೂ. ೩೬೩.೬೮ ಕೋಟಿ ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.
ಹಣಕಾಸು ಸಚಿವೆಯನ್ನು ಭೇಟಿಯಾದ ಡಿ.ಕೆ. ಶಿವಕುಮಾರ್
ಬೆಂಗಳೂರು, ಡಿ. ೨೦: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಭೆ ನಡೆಸಿದರು ಮತ್ತು ಬೆಂಗಳೂರು ಅಭಿವೃದ್ಧಿಗೆ ಸಂಬAಧಿಸಿದ ಯೋಜನೆಗಳಿಗೆ ನೆರವು ನೀಡು ವಂತೆ ಕೋರಿದರು. ಶಿವಕುಮಾರ್ ಅವರು ಕರ್ನಾಟಕದ ಜಲ ಸಂಪನ್ಮೂಲ ಯೋಜನೆಗಳಿಗೆ ಸಂಬAಧಿಸಿದ ಸಮಸ್ಯೆಗಳನ್ನು ಪರಿಹರಿ ಸುವಲ್ಲಿ ಮಧ್ಯಸ್ಥಿಕೆ, ಮಾರ್ಗದರ್ಶನ ಮತ್ತು ಬೆಂಬಲವನ್ನು ಕೋರಿದ್ದಾರೆ. ಸಭೆಯಲ್ಲಿ ಸೀತಾರಾಮನ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ, ಬೆಂಗಳೂರನ್ನು ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಒಂದನ್ನಾಗಿ ಮಾಡಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಆದಾಗ್ಯೂ, ಹಣ, ಸಂಪನ್ಮೂಲಗಳು ಮತ್ತು ವಿವಿಧ ಸಂಸ್ಥೆಗಳೊAದಿಗಿನ ಸಮನ್ವಯಕ್ಕೆ ಸಂಬAಧಿಸಿದAತೆ ಹಲವಾರು ಸವಾಲುಗಳು ಮತ್ತು ನಿರ್ಬಂಧಗಳನ್ನು ಎದುರಿಸುತ್ತಿದ್ದೇವೆ ಎಂದಿದ್ದಾರೆ. ನಗರದಲ್ಲಿ ನಾವು ೬೦ ಕಿ.ಮೀ. ಉದ್ದದ ಸುರಂಗವನ್ನು ನಿರ್ಮಿಸಲು ಪ್ರಸ್ತಾಪಿಸಿದ್ದೇವೆ. ಇದು ನಗರದೊಳಗೆ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್ ಅನ್ನು ರಚಿಸುತ್ತದೆ. ಪ್ರಮುಖ ರಸ್ತೆಗಳನ್ನು ಸಂಪರ್ಕಿಸುತ್ತದೆ ಮತ್ತು ಮೇಲ್ಮೆöÊ ದಟ್ಟಣೆಯನ್ನು ನಿವಾರಿ ಸುತ್ತದೆ ಯೋಜನೆಯ ಅಂದಾಜು ವೆಚ್ಚ ರೂ. ೩೦,೦೦೦ ಕೋಟಿ ಆಗಿದ್ದು, ಪ್ರತಿ ಕಿ.ಮೀ.ಗೆ ರೂ. ೫೦೦ ಕೋಟಿ ತಗಲುತ್ತದೆ ಎಂದರು.
‘ಮಹಿಳೆ ಸಾವಿಗೆ ಕೋವಿಡ್ ಹೊಸ ತಳಿ ಕಾರಣವಲ್ಲ’
ಬೆಂಗಳೂರು, ಡಿ. ೨೦: ಕೋವಿಡ್-೧೯ನಿಂದ ೬೪ ವರ್ಷ ವಯಸ್ಸಿನ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇವರು ಹೃದಯ, ಶ್ವಾಸಕೋಶ, ಅಧಿಕ ರಕ್ತದೊತ್ತಡ, ಕ್ಷಯ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇವರ ಸಾವಿಗೆ ಕೊರೊನಾ ಜೆಎನ್. ೧ ಕಾರಣವಲ್ಲ. ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರು ಚಾಮರಾಜಪೇಟೆ ನಿವಾಸಿ ಎಂದು ಅವರು ತಿಳಿಸಿದರು. ಕೇಂದ್ರ ಆರೋಗ್ಯ ಸಚಿವರ ಜೊತೆ ಕೋವಿಡ್ ಕುರಿತ ವರ್ಚುವಲ್ ಸಭೆಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಲಂಚ ಪ್ರಕರಣ ರದ್ದು
ಬೆಂಗಳೂರು, ಡಿ. ೨೦: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಟೆಂಡರ್ಗಾಗಿ ಲಂಚ ಪಡೆದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲಾಗಿದೆ ಎಂಬ ತಾಂತ್ರಿಕ ಕಾರಣದಿಂದ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮಾಡಾಳ್ ವಿರೂಪಾಕ್ಷಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ಅವರು, ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಮತ್ತು ತನಿಖೆಗೆ ಸ್ಪೀಕರ್ ಅನುಮತಿ ಪಡೆದಿಲ್ಲ ಎಂದು ಹೇಳಿದರು. ಆರೋಪಿ ಪರ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್, ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣ ರದ್ದುಗೊಳಿಸಿದೆ.
ಚಿನ್ನ-ಬೆಳ್ಳಿ ದರ ಹೆಚ್ಚಳ
ನವದೆಹಲಿ, ಡಿ. ೨೦: ಚಿನ್ನದ ದರ ೩೦೦ ರೂಪಾಯಿ ಏರಿಕೆ ಕಂಡಿದ್ದು, ಪ್ರತಿ ೧೦ ಗ್ರಾಮ್ ಚಿನ್ನಕ್ಕೆ ೬೩,೧೦೦ ರೂಪಾಯಿಯಾಗಿದೆ. ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಹಿಂದಿನ ದಿನ ಹಳದಿ ಲೋಹದ ಬೆಲೆ ೧೦ ಗ್ರಾಮ್ಗಳಿಗೆ ೬೨,೮೦೦ ರೂಪಾಯಿಗಳಷ್ಟಿತ್ತು. ಇದೇ ವೇಳೆ ಬೆಳ್ಳಿಯ ದರ ೮೦೦ ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ೭೮,೫೦೦ ರೂಪಾಯಿಗಳಾಗಿವೆ. ಬೆಳ್ಳಿಯ ಈ ಹಿಂದಿನ ದರ ಪ್ರತಿ ಕೆ.ಜಿ.ಗೆ ೭೭,೭೦೦ ರೂಪಾಯಿಗಳಿತ್ತು.
ಕೋವಿಡ್ ಹೆಚ್ಚಳ-ಕೇರಳದಲ್ಲಿ ಮೂರು ಸಾವು
ನವದೆಹಲಿ, ಡಿ. ೨೦: ದೇಶಾದ್ಯಂತ ಕೋವಿಡ್ ರೂಪಾಂತರಿ ಜೆಎನ್. ೧ ಭೀತಿ ಆವರಿಸಿರುವಂತೆಯೇ ಇತ್ತ ದೇಶದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ ಕೂಡ ಕ್ರಮೇಣ ಹೆಚ್ಚಾಗತೊಡಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ೩೪೧ ಹೊಸ ಪ್ರಕರಣಗಳು ವರದಿಯಾಗಿವೆೆ. ಕೇಂದ್ರ ಆರೋಗ್ಯ ಸಚಿವಾಲಯದ ವೆಬ್ಸೈಟ್ನಲ್ಲಿ ಬುಧವಾರದ ಅಂಕಿಅAಶಗಳ ಪ್ರಕಾರ, ಇಂದು ಬೆಳಿಗ್ಗೆ ೮ ಗಂಟೆಯವರೆಗೆ ದೇಶಾದ್ಯಂತ ವರದಿಯಾದ ೩೪೧ ಕೋವಿಡ್ ಸೋಂಕುಗಳಲ್ಲಿ ೨೯೨ ಕೇರಳದಿಂದ ಬಂದಿದ್ದಾಗಿದೆ. ಕೇರಳದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨೯೨ ಹೊಸ ಕೋವಿಡ್-೧೯ ಸೋಂಕುಗಳು ಮತ್ತು ಕಾಯಿಲೆಯಿಂದಾಗಿ ಮೂರು ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೨,೦೪೧ಕ್ಕೆ ತಲುಪಿದೆ ಎಂದು ಸಚಿವಾಲಯದ ವೆಬ್ಸೈಟ್ ತಿಳಿಸಿದೆ. ಕೇರಳ ರಾಜ್ಯದಲ್ಲಿ ವರದಿಯಾದ ಮೂರು ಸಾವುಗಳೊಂದಿಗೆ, ಮೂರು ವರ್ಷಗಳ ಹಿಂದೆ ಏಕಾಏಕಿ ಕೇರಳದಲ್ಲಿ ಕೋವಿಡ್ನಿಂದ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ೭೨,೦೫೬ಕ್ಕೆ ತಲುಪಿದೆ.