ಸಿದ್ದಾಪುರ, ಡಿ. ೧೯: ಚೆನ್ನಯ್ಯನಕೋಟೆ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಪ್ರಸ್ತುತ ಕುಡಿಯುವ ನೀರಿಗಾಗಿ ಹಾಹಾಕರವಾಗಿದ್ದು, ಪಂಚಾಯಿತಿ ವಿರುದ್ಧ ಹಾಡಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಬಸವನಹಳ್ಳಿ ಹಾಡಿಯ ನಿವಾಸಿಗಳಿಗೆ ಕಳೆದ ಒಂದು ತಿಂಗಳಿನಿAದ ನೀರಿನ ಸಮಸ್ಯೆ ಎದುರಾಗಿದೆಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ. ಕುಡಿಯುವ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ತರಲು ಸುಮಾರು ಒಂದು ಕಿ.ಲೋ. ದೂರದಷ್ಟು ತೆರಳುವಂತ ಸ್ಥಿತಿಯಾಗಿದ್ದು, ಈ ಭಾಗದಲ್ಲಿ ಪಂಚಾಯಿತಿಯಿAದ ನಿರ್ಮಿಸಿರುವ ನೀರಿನ ಟ್ಯಾಂಕ್‌ಗಳಲ್ಲಿ ನೀರು ಇಲ್ಲದೇ ಒಂದು ತಿಂಗಳಾಗಿದೆ.

ಕೊಳವೆ ಬಾವಿಗಳು ದುರಸ್ತಿ ಆಗಿದ್ದು, ಕೆಟ್ಟು ನಿಂತು ತುಕ್ಕು ಹಿಡಿದಿದೆ. ಇದರಿಂದಾಗಿ ಹಾಡಿಯ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಹಾಹಾಕರವಾಗಿದೆ. ಈ ಹಾಡಿಯ ನಿವಾಸಿಗಳು ಕೂಲಿ ಕೆಲಸಕ್ಕೆ ಹೊರಗಡೆ ಹೋಗಿ ಸಂಜೆ ಹಿಂತಿರುಗಿ ಮನೆಗೆ ಬಂದ ನಂತರವಷ್ಟೇ ದೂರಕ್ಕೆ ನೀರಿಗೆಂದು ತೆರಳಬೇಕು. ಆದರೆ ಸಂಜೆ ಕಾಡಾನೆಗಳು ಮನೆಯ ಸುತ್ತಮುತ್ತಲಿನಲ್ಲಿ ಓಡಾಡುತ್ತಿರುತ್ತವೆ. ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ಸಂಜೆ ಮನೆಯಿಂದ ಹೊರಕ್ಕೆ ಬರಲು ಭಯವಾಗುತ್ತಿದೆಂದು ಹಾಡಿಯ ನಿವಾಸಿ ಮಹೇಶ್ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಬಸವನಹಳ್ಳಿ ಭಾಗದ ಗ್ರಾಮದ ಪಂಚಾಯಿತಿ ಸದಸ್ಯರುಗಳಿಗೆ ಹಾಗೂ ಆಡಳಿತ ಮಂಡಳಿಯವರಿಗೆ ದೂರು ನೀಡಿದ್ದರೂ ಕೂಡ ಸ್ಪಂದಿಸದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಹಾಡಿಯ ನಿವಾಸಿಗಳು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಆಗಬಹುದೆಂದು ನಿವಾಸಿಗಳು ತಿಳಿಸಿದ್ದಾರೆ.

- ವಾಸು