ಮಡಿಕೇರಿ, ಡಿ. ೧೯: ಬಿಲ್ಲವ ಸಮಾಜ ಸೇವಾ ಸಂಘ ಮಡಿಕೇರಿ ವತಿಯಿಂದ ಬಿಲ್ಲವ ಸಮುದಾಯ ದವರಿಗೆ ೧೭ನೇ ವರ್ಷದ ಜಿಲ್ಲಾಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟ ತಾ.೩೦ ಹಾಗೂ ೩೧ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಬಿ.ಎಸ್.ಲೀಲಾವತಿ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯ ಗಂಟೆಗೆ ನಡೆಯಲಿರುವ ಪಂದ್ಯಾವಳಿಯನ್ನು ಸಮಾಜದ ಹಾಗೂ ಜಿಲ್ಲೆಯ ಗಣ್ಯ ವ್ಯಕ್ತಿಗಳು ಉದ್ಘಾಟಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್, ವಾಲಿಬಾಲ್ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಥ್ರೋಬಾಲ್, ವಿಷ ಚೆಂಡು ಮತ್ತು ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ ೫೦ ವರ್ಷ ಮೇಲ್ಪಟ್ಟವರಿಗೆ ವೇಗದ ನಡಿಗೆ, ೫ ವರ್ಷದ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ೧ ರಿಂದ ೨ನೇ ತರಗತಿ ಬಾಲಕ, ಬಾಲಕಿಯರಿಗೆ ಕಪ್ಪೆ ಜಿಗಿತ, ೩ ರಿಂದ ೫ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೫೦ ಮೀ. ಓಟ, ೫ನೇ ತರಗತಿಯಿಂದ ೭ನೇ ತರಗತಿ ಬಾಲಕ ಹಾಗೂ ಬಾಲಕಿಯರಿಗೆ ೧೦೦ ಮೀ. ಓಟ, ಪ್ರೌಢಶಾಲಾ ವಿಭಾಗ ಬಾಲಕ ಹಾಗೂ ಬಾಲಕಿಯರಿಗೆ ೨೦೦ ಮೀ. ಓಟ, ಪದವಿ ಪೂರ್ವ ಬಾಲಕ, ಬಾಲಕಿಯರಿಗೆ ೪೦೦ ಮೀ. ಓಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ತಾ.೩೦ ರಂದು ಕ್ರಿಕೆಟ್ ಪಂದ್ಯಾಟ ಮಾತ್ರ ನಡೆಯಲಿದ್ದು, ತಾ.೩೧ರಂದು ಕ್ರಿಕೆಟ್ ಫೈನಲ್ ಹಾಗೂ ಉಳಿದ ಎಲ್ಲಾ ಕ್ರೀಡಾಕೂಟಗಳು ನಡೆಯಲಿದೆ. ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ, ವಾಲಿಬಾಲ್ ಮತ್ತು ಥ್ರೋಬಾಲ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ತಾ.೨೪ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ೮೯೭೧೮೪೫೯೬೫, ೯೪೪೮೮೯೬೫೫೬, ೯೪೮೧೪೩೧೪೪೪ ಸಂಪರ್ಕಿಸುವAತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ರವೀಂದ್ರ, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ರಾಜಶೇಖರ್, ಮಾಜಿ ಉಪಾಧ್ಯಕ್ಷ ಸದಾನಂದ, ಸಂಘದ ಕ್ರೀಡಾ ಸಮಿತಿ ಕಾರ್ಯದರ್ಶಿ ಪ್ರದೀಪ್ ಕರ್ಕೆರ ಉಪಸ್ಥಿತರಿದ್ದರು.