ಸೋಮವಾರಪೇಟೆ, ಡಿ. ೧೯: ಇಲ್ಲಿನ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ, ನಿರ್ಲಕ್ಷö್ಯ ತಾಂಡವವಾಡುತ್ತಿದ್ದು, ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟ ಗಾರರ ತಂಡ ಹಾಗೂ ರೈತ ಸಂಘದ ನೇತೃತ್ವದಲ್ಲಿ ನಡೆದ ಅಹೋರಾತ್ರಿ ಪ್ರತಿಭಟನೆಯು ಜಿಲ್ಲಾಧಿಕಾರಿ ಭರವಸೆಯ ಮೇರೆ ಅಂತ್ಯಗೊAಡಿದೆ.

ಇಲ್ಲಿನ ಕಂದಾಯ, ಸರ್ವೇ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಹಾಗೂ ರೈತರ ದುರಸ್ತಿ ಫೈಲ್‌ಗಳು ವಿಲೇವಾರಿ ಮಾಡುವಂತೆ ಆಗ್ರಹಿಸಿ ರೈತರು ಹಾಗೂ ಸಾಮಾಜಿಕ ಹೋರಾಟ ಗಾರರ ಸಮಿತಿ ವತಿಯಿಂದ ತಾಲೂಕು ಕಚೇರಿ ಎದುರು ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ೨ ದಿನ ಪೂರೈಸಿದ ನಂತರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಧರಣಿಯನ್ನು ಅಂತ್ಯಗೊಳಿಸಲಾಯಿತು.

ನಿನ್ನೆ ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ತಾಲೂಕು ಕಚೇರಿ ಪಕ್ಕದಲ್ಲಿ ಶಾಮಿಯಾನ ಅಳವಡಿಸಿ ಪ್ರತಿಭಟನೆ ಕುಳಿತು ತಾಲೂಕು ಕಚೇರಿಯ ಅವ್ಯವಸ್ಥೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ಹಗಲು ತಹಶೀಲ್ದಾರ್ ನರಗುಂದ ಹೊರತುಪಡಿಸಿ ಯಾವುದೇ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ. ೧೧ ಗಂಟೆ ಸುಮಾರಿಗೆ ಶಾಸಕ ಮಂಥÀರ್ ಗೌಡ ಆಗಮಿಸಿ ಬೇಡಿಕೆಗಳನ್ನು ಆಲಿಸಿದರು.

ಈ ಸಂದರ್ಭ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರಾದರೂ ಪ್ರತಿಭಟನಾಕಾರರು ಜಗ್ಗದೇ ಜಿಲ್ಲಾಧಿಕಾರಿಗಳು ಬರುವ ತನಕ ಧರಣಿ ಮುಂದುವರಿಸುತ್ತೇವೆ. ತಾಲೂಕು ಕಚೇರಿಯಲ್ಲಿ ದುರಸ್ತಿ ವಿಷಯದಲ್ಲಿ ಗೋಲ್‌ಮಾಲ್ ಆಗಿದೆ. ಲಂಚ ಕೊಟ್ಟವರಿಗೆ ಮಾತ್ರ ದುರಸ್ತಿ ಮಾಡಲಾಗುತ್ತಿದೆ. ಹತ್ತಿಪ್ಪತ್ತು ವರ್ಷಗಳಿಂದ ಅರ್ಜಿ ಸಲ್ಲಿಸಿದವರು ಕಚೇರಿಗೆ ಸುತ್ತಿಸುತ್ತಿ ಹೈರಾಣಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಬಿ.ಪಿ. ಅನಿಲ್‌ಕುಮಾರ್ ಹೇಳಿದರು.

ತಾ. ೧೯ರಂದು ಜಿಲ್ಲಾಧಿಕಾರಿ ಗಳನ್ನು ಕರೆಸುವುದಾಗಿ ತಿಳಿಸಿ ಶಾಸಕರು ತೆರಳಿದರು. ಚಳಿಯ ನಡುವೆಯೂ ಸ್ಥಳದಲ್ಲೇ ಅಡುಗೆ ತಯಾರಿಸಿ, ಸೌದೆಗಳಿಂದ ಬೆಂಕಿ ಹಾಕಿ ಇಡೀ ರಾತ್ರಿ ಕಳೆದ ಪ್ರತಿಭಟನಾಕಾರರು, ಇಂದೂ ಸಹ ಧರಣಿ ಮುಂದುವರೆಸಿದರು.

ಮಧ್ಯಾಹ್ನವಾದರೂ ಅಧಿಕಾರಿ ಗಳು ಆಗಮಿಸದ ಹಿನ್ನೆಲೆ ಕೀಟನಾಶಕದ ಬಾಟಲಿ ಇಟ್ಟುಕೊಂಡು ಜಿಲ್ಲಾಧಿಕಾರಿಗಳು ಮಧ್ಯಾಹ್ನ ೧ ಗಂಟೆಗೆ ಬರದಿದ್ದರೆ ವಿಷ ಕುಡಿಯುವ ಬೆದರಿಕೆ ಹಾಕಿದರು. ನಂತರ ಪೋಲಿಸರು ಪ್ರತಿಭಟನಾಕಾರರ ಮನವೊಲಿಸಿದರು. ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಡಿಡಿಎಲ್‌ಆರ್ ಶ್ರೀನಿವಾಸ್ ಸೇರಿದಂತೆ ಕಂದಾಯ ಇಲಾಖೆಯವರು ಧರಣಿ ನಿರತರೊಂದಿಗೆ ಚರ್ಚಿಸಲು ಮುಂದಾದಾಗ ಜಿಲ್ಲಾಧಿಕಾರಿಗಳು ಬರುವ ತನಕ ಚರ್ಚೆ ಸಾಧ್ಯವಿಲ್ಲ ಎಂದು ಪಟ್ಟುಹಿಡಿದರು.

ಸಂಜೆ ೬ಗಂಟೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಧರಣಿ ನಡೆಯುವ ಸ್ಥಳಕ್ಕೆ ಆಗಮಿಸಿ, ರೈತರ ಬೇಡಿಕೆಗಳನ್ನು ಆಲಿಸಿದರು. ಕಳೆದ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಸಿಬ್ಬಂದಿಗಳಿAದ ಭ್ರಷ್ಟಾಚಾರ ಮಿತಿಮೀರಿದೆ. ರೈತರ ಶೋಷಣೆ ನಡೆಯುತ್ತಿದೆ. ಕೂಡಲೆ ಕರ್ತವ್ಯ ಲೋಪವೆಸಗುತ್ತಿರುವ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಬೇಕು ಎಂದು ಅನಿಲ್ ಕುಮಾರ್ ಹೇಳಿದರು.

ಕೆಲವು ಸಿಬ್ಬಂದಿಗಳು ದುರಸ್ತಿ ಸೇರಿದಂತೆ ಇತರ ಫೈಲ್‌ಗಳನ್ನು ತಿಂಗಳುಗಟ್ಟಲೆ ತಮ್ಮ ಟೇಬಲ್‌ಗಳಲ್ಲಿ ಇಟ್ಟುಕೊಂಡು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆ. ಪೂರ್ಣ ಪ್ರಮಾಣದ ತನಿಖೆ ಮಾಡಿ ಕರ್ತವ್ಯಲೋಪ ಎಸಗಿದ ನೌಕರರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತಾ.೨೧ರಂದು ಮಡಿಕೇರಿಯಲ್ಲಿ ಸಭೆ ಕರೆದು, ೨೪ ದುರಸ್ತಿ ಫೈಲ್‌ಗಳ ವಿಲೇವಾರಿ ಬಗ್ಗೆ ಕ್ರಮಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ದುರಸ್ತಿ ಕಡತಗಳನ್ನು ವಿನಾಕಾರಣ ಹೆಚ್ಚು ದಿನಗಳ ಕಾಲ ತಮ್ಮ ಟೇಬಲ್‌ನಲ್ಲೆ ಇರಿಸಿಕೊಂಡ ಅಧಿಕಾರಿಗಳು ಹಾಗು ಕೇಸ್‌ವರ್ಕರ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇನೆ ಎಂದು ಧರಣಿ ನಿರತರಿಗೆ ಭರವಸೆ ನೀಡಿದರು.

ಎಲ್ಲಾ ಕಡತಗಳನ್ನು ಜೇಷ್ಠತೆಯ ಆಧಾರದಲ್ಲಿ ವಿಲೇವಾರಿಗೆ ಅದೇಶ ನೀಡುತ್ತೇನೆ. ಹಿರಿಯ ನಾಗರಿಕರ ಅರ್ಜಿಗಳನ್ನು ಕೂಡಲೆ ವಿಲೇವಾರಿಗೆ ಕ್ರಮತೆಗೆದುಕೊಳ್ಳಲಾಗುವುದು. ಬ್ರೋಕರ್‌ಗಳ ಹೆಸರುಗಳನ್ನು ಪಟ್ಟಿ ಮಾಡಿ, ಕಂದಾಯ ಇಲಾಖೆಯ ವತಿಯಿಂದ ಪೊಲೀಸ್ ದೂರು ನೀಡಿ, ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಧರಣಿ ನಿರತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಹಿಂಪಡೆಯ ಲಾಯಿತು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಜಿ.ಎಂ.ಹೂವಯ್ಯ, ಅಜ್ಜಳ್ಳಿ ನವೀನ್, ಶುಂಠಿ ಚರಣ್, ಭರತ್‌ಕುಮಾರ್, ಕೌಶಿಕ್, ಅಶ್ವಥ್, ಮಹೇಶ್, ಚಿದಾನಂದ, ಮಧುಕುಮಾರ್, ತಾಕೇರಿ ಕಾರ್ತಿಕ್, ಅಭಿಷೇಕ್, ಮಚ್ಚಂಡ ಅಶೋಕ್, ಕೆ.ಟಿ. ಪರಮೇಶ್, ಫ್ರಾನ್ಸಿಸ್ ಡಿಸೋಜ, ಹಿರಿಕರ ರಮೇಶ್, ಡಾಲಿ ಪ್ರಕಾಶ್, ಬಸಪ್ಪ, ರಾಜಪ್ಪ, ಸಂಭ್ರಮ್, ರಾಕೇಶ್ ಪಟೇಲ್, ರಜಿ ಶಿವರಾಜ್, ತ್ರಿಶೂಲ್ ಮತ್ತಿತರರು ಇದ್ದರು. ಪೊಲೀಸ್ ಇನ್ಸ್ಪೆಕ್ಟರ್ ರಾಮ ಚಂದ್ರನಾಯಕ್ ಹಾಗೂ ಸಿಬ್ಬಂದಿಗಳು, ಡಿಎಆರ್ ತುಕಡಿಯೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.