ಮಡಿಕೇರಿ, ಡಿ. ೧೮: ಕ್ಷÄಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ಮಹಿಳೆಯನ್ನು ಕೊಲೆಗೈದಿದ್ದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಮದೆನಾಡು ಗ್ರಾಮದ ಜೋಡುಪಾಲದ ಅಬ್ಬಿಕೊಲ್ಲಿಯಲ್ಲಿ ವಾಸವಾಗಿದ್ದ ಹೊನ್ನಮ್ಮ ಎಂಬವರನ್ನು ಕೊಲೆ ಮಾಡಿದ್ದ ಅದೇ ಗ್ರಾಮದ ಕೆ.ಕೆ. ಆನಂದ್ ಶಿಕ್ಷೆಗೆ ಒಳಗಾದ ಅಪರಾಧಿ.

ಮೃತೆ ಹೊನ್ನಮ್ಮ ಹಾಗೂ ಶಿಕ್ಷೆಗೆ ಒಳಗಾದ ಆನಂದ್ ನೆರೆಕರೆಯವರಾಗಿದ್ದು, ಹೊನ್ನಮ್ಮ ಆನಂದ್‌ನ ಮನೆ ಬಳಿಯ ಕಾಲುದಾರಿಯಲ್ಲಿ ಚಿಕ್ಕ ಸ್ನಾನಗೃಹವನ್ನು ನಿರ್ಮಿಸಿದ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ಉಂಟಾಗುತಿತ್ತು. ತಾ. ೧೬-೧೨-೨೦೧೯ ರಂದು ಇದೇ ವಿಚಾರಕ್ಕೆ ಹೊನ್ನಮ್ಮಳ ಮನೆಗೆ ತೆರಳಿದ ಆನಂದ್ ಜಗಳ ಮಾಡಿ ಕತ್ತಿಯಿಂದ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ, ಪರಿಣಾಮ ಸ್ಥಳದಲ್ಲಿಯೇ ಹೊನ್ನಮ್ಮ ಮೃತಪಟ್ಟಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಮ್ ಪ್ರಸಾದ್ ಅಪರಾಧಿ ಆನಂದ್‌ಗೆ ಜೀವಾವಧಿ ಶಿಕ್ಷೆ, ರೂ. ೧೦ ಸಾವಿರ ದಂಡ, ಕಟ್ಟಲು ತಪ್ಪಿದ್ದಲ್ಲಿ ೧ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿ ವಾದ ಮಂಡಿಸಿದರು.