ಸಿದ್ದಾಪುರ, ಡಿ. ೧೮: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಕಳೇಬರ ಪತ್ತೆ ಆಗಿದೆ. ಕಳೆದ ಕೆಲವು ತಿಂಗಳಿನಿAದ ಕುಶಾಲನಗರ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಅಂದಾಜು ೨೫ರಿಂದ ೩೦ ವರ್ಷ ಪ್ರಾಯದ ಗಂಡಾನೆಯು ಕಾಲು ನೋವಿನಿಂದ ಬಳಲುತ್ತಿದ್ದು, ಇದೀಗ ಕಳೆದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದು, ಕಳೇಬರ ತಡವಾಗಿ ಪತ್ತೆ ಆಗಿದೆ.

ಅರಣ್ಯ ಸಿಬ್ಬಂದಿಯು ಅರಣ್ಯದೊಳಗೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದುರ್ನಾತ ಬೀರುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಾಲ್ದಾರೆಯ ಅರಣ್ಯದ ಮಧ್ಯ ಭಾಗದಲ್ಲಿ ಕಾಡಾನೆಯ ಕಳೇಬರ ಪತ್ತೆ ಆಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಎ.ಸಿ.ಎಫ್ ಎ.ಎ. ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್‌ಕುಮಾರ್, ಉಪವಲಯ ಅರಣ್ಯಾಧಿಕಾರಿ ರಂಜನ್, ಸಿಬ್ಬಂದಿಗಳಾದ ಮಂಜುನಾಥ್ ಗೂಳಿ, ಮಣಿಕಂಠ ಭೇಟಿ ನೀಡಿ ಪರಿಶೀಲಿಸಿದರು. ನಂತರ ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಕಾಡಾನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಆನೆಯ ಎರಡು ದಂತಗಳನ್ನು ಅರಣ್ಯ ಇಲಾಖಾಧಿಕಾರಿ ಗಳು ತಮ್ಮ ವಶಕ್ಕೆ ಪಡೆದುಕೊಂಡರು. ಕಾಡಾನೆಯು ಅನಾರೋಗ್ಯದಿಂದ ಸಾವನ್ನಪ್ಪಿದೆಂದು ಎ.ಸಿ.ಎಫ್ ಗೋಪಾಲ್ ‘ಶಕ್ತಿ’ಗೆ ಮಾಹಿತಿ ನೀಡಿದರು. ಈ ಕಾಡಾನೆಯು ಮಾಲ್ದಾರೆಯ ಆಸ್ತನದ ಬಳಿ ಕಾಲುನೋವಿನಿಂದ ಸುತ್ತಾಡುತ್ತಿತ್ತು ಎಂದು ತಿಳಿಸಿದರು.

-ವಾಸು