ಕಣಿವೆ, ಡಿ. ೧೬: ನಾಡಿನ ಜೀವನದಿ ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮ ಕ್ಷೇತ್ರವಾದ ಕೂಡಿಗೆಯಲ್ಲಿ ತಾ. ೧೮ ರಂದು ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಜರುಗಲಿದೆ.
ಕುಶಾಲನಗರ ತಾಲೂಕಿನ ಅತ್ಯಂತ ಪ್ರಮುಖ ಕ್ಷೇತ್ರವಾಗಿರುವ ಕೂಡಿಗೆಯಲ್ಲಿರುವ ಟಾಟಾ ಕಾಫಿ ಸಂಸ್ಥೆ ತೋಟದಲ್ಲಿರುವ ಈ ಸನ್ನಿಧಿಯಲ್ಲಿ ೭೫ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸುಬ್ರಹ್ಮಣ್ಯ ಷಷ್ಠಿ ರಥೋತ್ಸವ ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತಸ್ತೋಮದ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಶ್ರದ್ಧಾ ಕೇಂದ್ರ : ಕೂಡಿಗೆಯ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕೊನೆಯಲ್ಲಿ ಪ್ರತಿ ವರ್ಷವೂ ಜರುಗುವ ಈ ರಥೋತ್ಸವದಲ್ಲಿ ಸುತ್ತಲಿನ ಹೆಬ್ಬಾಲೆ, ಕಣಿವೆ, ಹುಲುಸೆ, ಮದಲಾಪುರ, ಹಾರಂಗಿ, ಚಿಕ್ಕತ್ತೂರು, ದೊಡ್ಡತ್ತೂರು, ಕಣಿವೆ, ಹಕ್ಕೆ, ಹುಲುಸೆ, ಮರೂರು ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯ ಕಾವೇರಿ ನದಿಯಂಚಿನ ಗ್ರಾಮಗಳ ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ.
ಟಾಟಾ ಕಾಫಿ ಸಂಸ್ಥೆಯವರ ನಿರ್ವಹಣೆಗೂ ಮುನ್ನಾ ಈ ಸನ್ನಿಧಿಯಲ್ಲಿ ಸಾಕ್ಷಾತ್ ಋಷಿಮುನಿ ಗಳಿಂದ ಕಲ್ಲಿನ ಮೂರ್ತಿಯ ಪೂಜೆಗೆ ಒಳಪಡುತ್ತಿದ್ದ ಬಗ್ಗೆ ಹಿರಿಯರು ಹೇಳುತ್ತಿದ್ದರು ಎಂದು ಟಾಟಾ ಕಾಫಿ ಸಂಸ್ಥೆಯ ಉಪ ವ್ಯವಸ್ಥಾಪಕ ಮಾಚೆಟ್ಟಿರ ಮಂದಣ್ಣ ‘‘ಶಕ್ತಿ’’ಗೆ ಮಾಹಿತಿ ನೀಡಿದರು.
(ಮೊದಲ ಪುಟದಿಂದ)
ಅಷ್ಟ ಮಂಗಲ ಪ್ರಶ್ನೆಯಲ್ಲಿ ಬದಲಾವಣೆ : ಟಾಟಾ ಕಾಫಿ ಸಂಸ್ಥೆಯ ದೇವಾಲಯ ಸಮಿತಿ ವತಿಯಿಂದ ನಿರ್ವಹಣೆಗೊಳಪಟ್ಟಿರುವ ಈ ದೇವಾಲಯವನ್ನು ಕಳೆದ ಹದಿನೈದು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿತ್ತು. ಇದೀಗ ಮತ್ತೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಾಲಯದ ಗರ್ಭ ಗುಡಿಯ ಮುಂಬದಿಯ ಪಶ್ಚಿಮದ ಪ್ರವೇಶ ದ್ವಾರದಲ್ಲಿ ಹಿಂದೆ ಇದ್ದಂತಹ ಪುಷ್ಕರಣಿಯನ್ನು ನಿರ್ಮಿಸುವ ಜೊತೆಗೆ ಕೆಲವೊಂದು ಬದಲಾವಣೆಗಳನ್ನು ಮಾಡುವ ಬಗ್ಗೆ ತಂತ್ರಿಗಳು ತಿಳಿಸಿದ್ದಾರೆ.
ಆದ್ದರಿಂದ ರಥೋತ್ಸವದ ಬಳಿಕ ದೇಗುಲದಲ್ಲಿ ಮತ್ತಷ್ಟು ಬದಲಾವಣೆಯ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷರೂ ಆಗಿರುವ ಟಾಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ಕಂಬೀರAಡ ಸೋಮಯ್ಯ ‘‘ಶಕ್ತಿ’’ಗೆ ವಿವರಿಸಿದರು.
ಸಾವಿರಾರು ಮಂದಿ ರಥೋತ್ಸವದಲ್ಲಿ ಭಾಗಿ : ಷಷ್ಠಿಯ ದಿನದಂದು ನಡೆವ ರಥೋತ್ಸವದಲ್ಲಿ ಕೂಡಿಗೆ ಸುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ಕಳೆದ ೫೫ ವರ್ಷಗಳಿಂದ ಟಾಟಾ ಕಾಫಿ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ರಥೋತ್ಸವದಲ್ಲಿ ಭಾಗಿಯಾಗುವ ಎಲ್ಲಾ ಭಕ್ತರಿಗೂ ದೇವಾಲಯ ಸಮಿತಿಯಿಂದಲೇ ಪೂಜಾ ವಿಧಿಗಳ ಖರ್ಚು ಹಾಗೂ ಅನ್ನಸಂತರ್ಪಣೆಯ ವೆಚ್ಚಗಳನ್ನು ಭರಿಸಿಕೊಂಡು ಬರಲಾಗುತ್ತಿದೆ.
ಟಾಟಾ ಕಾಫಿ ಸಂಸ್ಥೆಯ ನೌಕರರೇ ಇರುವ ದೇವಾಲಯ ಸಮಿತಿಯಲ್ಲಿ ಗ್ರಾಮದ ಸಾರ್ವಜನಿಕ ಭಕ್ತರು ಇಲ್ಲದಿದ್ದರೂ ಕೂಡ ಸಾಮೂಹಿಕವಾದ ಎಲ್ಲಾ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ವಿಶೇಷ ಪಡೆದುಕೊಂಡಿದೆ.
ಮೊದಲು ಸ್ವಂತ ರಥ ಇರಲಿಲ್ಲ : ದೇವಾಲಯ ಸಮಿತಿ ಮಾಡುವ ರಥೋತ್ಸವದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ಕೈಗೊಳ್ಳಲು ಸ್ವಂತದ್ದಾದ ದೇವಾಲಯದ ರಥವಿಲ್ಲದ ಕಾರಣ ಕೂಡುಮಂಗಳೂರು ಹಾಗೂ ಕೂಡ್ಲೂರು ಜೋಡಿ ಗ್ರಾಮಗಳ ದೊಡ್ಡಮ್ಮ ದೇವರಿಗೆ ಸೇರಿದ ರಥವನ್ನು ಬಳಸಲಾಗುತ್ತಿತ್ತು.
ಕ್ರಮೇಣ ೨೦ ವರ್ಷಗಳ ಬಳಿಕ ಟಾಟಾ ಕಾಫಿ ಸಂಸ್ಥೆ ವತಿಯಿಂದಲೇ ಪ್ರತ್ಯೇಕವಾದ ರಥವನ್ನು ನಿರ್ಮಾಣ ಮಾಡಿದ್ದು ಅದರಲ್ಲಿ ಉದ್ಭವ ಸುಬ್ರಹ್ಮಣ್ಯ ದೇವರ ರಥೋತ್ಸವ ಸಾಂಗವಾಗಿ ನಡೆಯುತ್ತಿದೆ.
ವಿಶೇಷ ವರದಿ : ಕೆ.ಎಸ್.ಮೂರ್ತಿ