ಕಡಂಗ, ಡಿ. ೧೬: ವೀರಾಜಪೇಟೆ ತಾಲೂಕಿನ ಕುಂಜಿಲಗೇರಿ ಗ್ರಾಮದ ಬೆಟ್ಟದ ಮೇಲೆ ನೆಲೆನಿಂತಿರುವ ಬೆಟ್ಲಪ್ಪ ಈಶ್ವರ ದೇವರ ವಿಶೇಷ ಪೂಜೆ ದಿನಾಂಕ ೧೫.೧೧.೨೦೨೩ ರಿಂದ ೧೪.೧೨.೨೦೨೩ ರವರೆಗೆ ನಡೆಸ ಲಾಯಿತು
ಈ ದೇವಾಲಯವು ವಿಶೇಷ ಇತಿಹಾಸ ಹೊಂದಿದ್ದು ಬೆಟ್ಟದ ಮೇಲೆ ನೆಲೆನಿಂತಿರುವ ಈಶ್ವರನಿಗೆ ಪ್ರತಿ ವರ್ಷ ಇದೇ ಸಮಯದಲ್ಲಿ ೩೦ ದಿನಗಳು ಪೂಜೆ ನಡೆಸುವುದು ವಿಶೇಷವಾಗಿದೆ.
ತಾ.೧೪ ರಂದು ಮಹಾದೇವನಿಗೆ ವಾರ್ಷಿಕ ಮಹಾಪೂಜೆಯು ನಡೆಯಿತು. ಪೂಜೆಯ ಸಮಯದಲ್ಲಿ ಕೇರಳದ ಚೆಂಡೆವಾದ್ಯ ಹಾಗೂ ಮಹಾಪೂಜೆಯ ನಂತರ ಬೆಟ್ಟದ ಕೆಳಗೆ ಇರುವ ಅರಳಿ ಮರದ ಸುತ್ತ ದೇವರ ಬಲಿ ನಡೆಯಿತು.
ನಂತರ ಬೆಟ್ಟದ ತಪ್ಪಲಿನಲ್ಲಿ ಇರುವ ಈಶ್ವರನ ದೇವಸ್ಥಾನದಲ್ಲಿ ನೈವೇದ್ಯವೂ ಈಶ್ವರನಿಗೆ ಸಮರ್ಪಿತವಾಯಿತು. ಸಾವಿರಾರು ಭಕ್ತರು ಆಗಮಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿದರು.
ಯೂನಿಯನ್ ದೇವಸ್ಥಾನ ಸಂಘದ ಪದಾಧಿಕಾರಿಗಳು, ಕುಂಜಿಲಗೇರಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನೌಫಲ್ ಕಡಂಗ