ಮಡಿಕೇರಿ, ಡಿ. ೧೫: ಪಂಚ ಗ್ಯಾರಂಟಿ ಅನುಷ್ಠಾನದ ಬೆನ್ನಲ್ಲೇ ರಾಜ್ಯ ಸರಕಾರ ಸಹಕಾರಿ ಸಾಲಗಳ ಮೇಲಿನ ಬಡ್ಡಿ ಮನ್ನಾದ ಘೋಷಣೆ ಮಾಡಿದೆ. ಅಸಲನ್ನು ಪಾವತಿ ಮಾಡಿದವರಿಗೆ ಮಾತ್ರ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡ ಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಣೆ ಮಾಡಿದ್ದು, ಸರಕಾರದ ಅಧಿಕೃತ ಆದೇಶ ಬಂದ ನಂತರವಷ್ಟೇ ಪ್ರಕ್ರಿಯೆ ಕುರಿತು ಸ್ಪಷ್ಟತೆ ದೊರೆಯಲಿದೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕೈಗೊಂಡ ಕ್ರಮದ ಬಗ್ಗೆ ವಿವರಿಸುತ್ತಿದ್ದ ಸಂದರ್ಭ ಈ ಬಗ್ಗೆ ಪ್ರಕಟಿಸಿದರು.
ಸಹಕಾರ ಬ್ಯಾಂಕ್ಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಸರ್ಕಾರ ತೀರ್ಮಾನಿಸಿದೆ.
ಬರಗಾಲ ಪರಿಸ್ಥಿತಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಈ ಯೋಜನೆಯಿಂದ ಪೂರಕವಾಗುತ್ತದೆ ಎಂದಿದ್ದಾರೆ. ‘ಬರಗಾಲ ಪರಿಸ್ಥಿತಿ ಇರುವ ಕಾರಣ’ ಎಂದು ಮುಖ್ಯಮಂತ್ರಿ ಹೇಳಿರುವ ಕಾರಣಕ್ಕೆ ಇದು ರೈತರ ಸಾಲದ ಮೇಲಿನ ಬಡ್ಡಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ.