ಮಡಿಕೇರಿ, ಡಿ. ೧೬: ಡಿಸೆಂಬರ್ ೧೫ರ ಶುಕ್ರವಾರ ಸಂಜೆ ಮಡಿಕೇರಿಯ ಬ್ರಾಹ್ಮಣರ ಕಲ್ಯಾಣ ಮಂಟಪ (ಶತಮಾನ ಭವನ)ದಲ್ಲಿ ಪೊನ್ನಂಪೇಟೆಯ ವಿದ್ಯಾಶ್ರೀ ಹಾಗೂ ಅಶೋಕ್ ಭಟ್ ಅವರ ಪುತ್ರಿ ಕುಮಾರಿ ಪ್ರೇಕ್ಷ ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಜರುಗಿತು.
ಬೆಂಗಳೂರಿನ ಧನ್ಯಶ್ರೀ ನೃತ್ಯ ಕಲಾನಿಕೇತನ ಸಂಸ್ಥೆಯ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಡಗಿನ ಹಿರಿಯ ಕಲಾವಿದರಾಗಿದ್ದ ದಿವಂಗತ ಅಂಬಳೆ ಸುಬ್ಬರಾವ್ ಅವರ ಪುತ್ರಿ ಕೆ.ಎಸ್. ಅಂಬಳೆ ರಾಜೇಶ್ವರಿ ಹಾಗೂ ಕೊಡಗಿನ ನಿನಾದ ಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಇದೇ ಸಂದರ್ಭ ಕೊಡಗಿನ ಹಿರಿಯ ಕಲಾವಿದ ಅಂಬಳೆ ಸತ್ಯಪ್ರಸಾದ್ ದಂಪತಿ, ಕುಮಾರಿ ಪ್ರೇಕ್ಷ ಭಟ್ ಗುರುಗಳಾದ ಬೆಂಗಳೂರಿನ ಧನ್ಯಶ್ರೀ, ಸೌತಡ್ಕ ಮಹಾ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ದಂಪತಿ, ವೇದ ಪಂಡಿತರಾದ ಗೋಪಾಲಕೃಷ್ಣ ಗೋಕುಲ ಅಡಿಗ ದಂಪತಿ, ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವಹಿಸಿದ ಕಲಾವಿದರು, ರಂಗಸಜ್ಜಿಗೆ ಹಾಗೂ ಅಲಂಕಾರ ನಿರ್ವಹಿಸಿದ ಕಲಾವಿದರಿಗೆ ಗೌರವ ಅರ್ಪಣೆ ಮಾಡಲಾಯಿತು. ಕುಮಾರಿ ಪ್ರೇಕ್ಷ ಭಟ್ ಎರಡು ತಾಸು ನಿರಂತರವಾಗಿ ನೃತ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.