ವೀರಾಜಪೇಟೆ, ಡಿ. ೧೬: ಐತಿಹಾಸಿಕ ಹಿನ್ನಲೆ ಇರುವ ಕಾಕೋಟುಪರಂಬು ಕಾಲಭೈರವ ದೇವರ ಉತ್ಸವವು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಜರುಗಿ ಬೇತ್ರಿಯ ಕಾವೇರಿ ನದಿಯಲ್ಲಿ ಜಳಕ ಮಾಡುವುದರೊಂದಿಗೆ ತಾ ೧೭ರಂದು (ಇಂದು) ತೆರೆ ಬೀಳಲಿದೆ.
ತಾ. ೧ರಂದು ದೇವರ ಕಟ್ಟು ಬಿದ್ದು ೧೪ರವರೆಗೆ ಪೀಲಿ ಮಂದ್ನಲ್ಲಿ ರಾತ್ರಿ ಪೀಲಿಯಾಟ್ ನಡೆಯಿತು. ತಾ. ೧೫ರಂದು ಅಪರಾಹ್ನ ೩ ಗಂಟೆಗೆ ಮರತ ತೆರೆ ನಡೆದ ನಂತರ ಅದೇ ದಿನ ರಾತ್ರಿ ದೇವಾಲಯದ ತಕ್ಕ ಮುಖ್ಯಸ್ತರಾದ ತೋಣೂರುಕೇರಿಯ ಅಮ್ಮಂಡಿರ ಕುಟುಂಬದಿAದ ದೇವರ ಭಂಡಾರ ಬಂದ ನಂತರ ತಾ. ೧೬ ರಂದು ಮುಂಜಾನೆ ಇರುಳು ಬೆಳಕು, ಬೋಳಕಾಟುವಿನೊಂದಿಗೆ ನೆರೆದಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡರು.
ತಾ. ೧೬ ರಂದು ಅಪರಾಹ್ನ ೧ ಗಂಟೆಗೆ ಮೂಗೂರುಕೇರಿಯಿಂದ ದೇವರ ಕೊಡೆ, ಪಾಂಡಿಮಾಡುಕೇರಿಯಿAದ ದೇವರ ಚೌರಿ ಹಾಗೂ ಪೆಮ್ಮಾಡುಕೇರಿಯಿಂದ ದೇವರ ಬೆತ್ತದ ಕುದುರೆಯನ್ನು ತಂದು ದೇವಾಲಯಕ್ಕೆ ಒಪ್ಪಿಸಿ ದೇವರ ದರ್ಶನ ಪಡೆಯಲಾಯಿತು. ದೇವಾಲಯದಲ್ಲಿ ಬೊಳಕಾಟು, ಚಂಡೆ ವಾದ್ಯಗಳು ಮೊಳಗಿದವು.
ಸಂಜೆ ೫ ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ದೇವಾಲಯದ ಪಕ್ಕದಲ್ಲಿಯೇ ಇರುವ ಆಲದ ಮರದ ಸುತ್ತ ೧೧ ಸುತ್ತು ಪ್ರದಕ್ಷಿಣೆ ಬರಲಾಯಿತು. ಇದೇ ಸಂದರ್ಭ ಚಾಮುಂಡಿ ದೇವರ ಕೋಲಗಳು ನಡೆದವು.
ಎಲ್ಲಾ ಜನಾಂಗದವರು ಒಟ್ಟಿಗೆ ಸೇರಿ ೧೫ ದಿನಗಳ ಕಾಲ ಕಟ್ಟುಪಾಡುಗಳೊಂದಿಗೆ ಆಚರಿಸುವ ಈ ಹಬ್ಬದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ತಾ. ೧೭ರಂದು ಸಂಜೆ ೪ ಗಂಟೆಗೆ ಬೇತ್ರಿಯ ಕಾವೇರಿ ಹೊಳೆಯಲ್ಲಿ ದೇವರ ಜಳಕ ಕಾರ್ಯ ನಡೆದು ರಾತ್ರಿ ದೇವಾಲಯದಲ್ಲಿ ಪೀಲಿಯಾಟ್ನೊಂದಿಗೆ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯಲಾಗುವುದು.