ಮಡಿಕೇರಿ, ಡಿ. ೧೭: ಕವಯತ್ರಿ ರಾಧಿಕಾ ವಿಶ್ವನಾಥ್ ಅವರು ಬರೆದಿರುವ ನೂರಕ್ಕೂ ಅಧಿಕ ಕವನಗಳನ್ನು ಒಳಗೊಂಡಿರುವ ‘‘ಒಲವ ಧಾರೆ’’ ಸಂಕಲನ ಇಂದು ಲೋಕಾರ್ಪಣೆಗೊಂಡಿತು.
ರೆಡ್ಬ್ರಿಕ್ಸ್ ಇನ್ ಸತ್ಕಾರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯರಾದ ಜಿ.ಟಿ. ರಾಘವೇಂದ್ರ, ಅನಂತ್ ರಾಮಯ್ಯ ಮತ್ತು ಅತಿಥಿಗಳು ಪುಸ್ತಕ ಬಿಡುಗಡೆ ಮಾಡಿದರು.
ಈ ಸಂದರ್ಭ ಜಿ.ಟಿ. ರಾಘವೇಂದ್ರ ಅವರು ಮಾತನಾಡಿ, ಇಂದು ಯುವ ಜನಾಂಗದಲ್ಲಿ ಸಾಕಷ್ಟು ಬರಹಗಾರರು, ಕವಿ- ಸಾಹಿತಿಗಳು ತೊಡಗಿಸಿಕೊಳ್ಳುತ್ತಿದ್ದು, ಸಮಾಜದಲ್ಲಿ ಗಟ್ಟಿಕಾಳಿನಂತಹ ಸಾಹಿತ್ಯ ಉಳಿಯಬೇಕಾಗಿದೆ ಎಂದರು.
ರಾಧಿಕಾ ಅವರ ತಂದೆ ಅನಂತ್ ರಾಮಯ್ಯ ಅವರು ಚರಿತ್ರೆಯ ತುಣುಕುಗಳನ್ನು ಮೆಲುಕು ಹಾಕಿ ಉತ್ತಮ ಕಾರ್ಯಗಳಿಗೆ ಭಗವಂತನ ಆಶೀರ್ವಾದ ಇರುತ್ತದೆ ಎಂದರು.
ಆಕಾಶವಾಣಿ ಹಿರಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಒಳಗೇ ಉಳಿದರೆ ಮನದಲ್ಲಿ ಕಾರ್ಗತ್ತಲು ತುಂಬುತ್ತದೆ, ನಿಮ್ಮ ಹೆಸರೇ ನಿಮಗೆ ಮರೆಯುವ ಸ್ಥಿತಿ ಬರುತ್ತದೆ, ಕೋಣೆಗಳಿಂದ ಹೊರಬಂದು ಚಟುವಟಿಕೆಗಳಲ್ಲಿ ತೊಡಗಿ ಎಂದು ಕರೆ ನೀಡಿದರು.
‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಬಾಲ್ಯದಲ್ಲಿ ಬರಹದತ್ತ ಒಲವು ಕಂಡಿರದ ರಾಧಿಕಾ ಅವರಿಗೆ ಇತ್ತೀಚೆಗಷ್ಟೇ ಆಸಕ್ತಿ ಬಂದರೂ, ಉತ್ತಮ ಕವನ ರಚನಾ ಶಕ್ತಿ ಬರಲು ಪೂರ್ವಜನ್ಮಗಳ ಸಾಧನೆ ಮತ್ತು ಬಯಕೆ ಕಾರಣ ಎಂಬುದಕ್ಕೆ ಉದಾಹರಣೆ ಸಹಿತ ವಿವರಿಸಿದರು.
ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಅವರು ಮಾತನಾಡಿ, ದಶಕಗಳ ಹಿಂದೆ ಕೊಡಗಿನಲ್ಲಿ ವಿರಳ ಎನಿಸಿದ್ದ ಸಾಹಿತ್ಯಾಸಕ್ತರ ಸಂಖ್ಯೆ ಇಂದು ಏರುತ್ತಿರುವುದು ಸಂತಸದ ವಿಚಾರ ಎಂದರು. ಜಿಲ್ಲೆಯಲ್ಲಿ ಸಾಹಿತಿಗಳು ಮೇಲ್ಬರಲು ಮುಖ್ಯವಾಗಿ ಶಕ್ತಿ ದಿನಪತ್ರಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ ಮತ್ತು ಸಂಘ - ಸಂಸ್ಥೆಗಳ ಕೊಡುಗೆ ಅಪಾರವಿದೆ ಎಂದರು.
ಕೃಷ್ಣವೇಣಿ ಮುಳಿಯ ಕೇಶವ ಪ್ರಸಾದ್ ಪ್ರಾರ್ಥಿಸಿ, ಶುಭ ಬಯಸಿದರು. ಕೆ.ಕೆ. ವಿಶ್ವನಾಥ್ ಸ್ವಾಗತಿಸಿದರು. ಕವಯತ್ರಿ ರಾಧಿಕಾ ಪುಸ್ತಕ ಹೊರತರಲು ದೊರಕಿದ ಪ್ರೇರಣೆ ಮತ್ತು ಸಹಕಾರಗಳನ್ನು ಅಂತರಾಳದ ನುಡಿಗಳೊಂದಿಗೆ ಸ್ಮರಿಸಿದರು.
ಕಾವ್ಯಶ್ರೀ ಅವರ ಶಿಷ್ಯರಿಂದ ಗಾಯನ, ನೃತ್ಯ, ಹಿರಿಯರು- ಕಿರಿಯ ಕಲಾವಿದರಿಂದ ಹಾಡುಗಳ ಸಂಭ್ರಮ ಸಮಾರಂಭಕ್ಕೆ ಕಳೆಗೂಡಿಸಿತು. ವಿಜಯಲಕ್ಷಿö್ಮ ಚೇತನ್ ಅವರಿಂದ ಕಾರ್ಯಕ್ರಮ ನಿರೂಪಣೆ, ಗೌರಿ ಹಿರಿಯಣ್ಣ ವಂದನಾರ್ಪಣೆ ಮಾಡಿದರು.