ಸೋಮವಾರಪೇಟೆ, ಡಿ. ೧೭ : ‘ಕಾಡಾನೆಯೊಂದು ನಾಡಿಗೆ ಬಂದಿದೆ. ಇದನ್ನು ಅರಣ್ಯಕ್ಕೆ ಅಟ್ಟಿ ಎಂದು ಒಂದಿಷ್ಟು ದಿನ ಅರಣ್ಯ ಇಲಾಖೆಗೆ ಗೋಗರೆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಕಾಡಾನೆಗೆ ದೃಷ್ಟಿದೋಷವಿದ್ದು-ಸೆರೆಹಿಡಿದು ಉಪಚರಿಸಿ ಎಂದು ಬೇಡಿಕೊಂಡರೂ ಅರಣ್ಯ ಇಲಾಖೆ ಮನಸ್ಸು ಮಾಡಲಿಲ್ಲ. ಇಷ್ಟಾಗಿ ಅರಣ್ಯ ಇಲಾಖೆ ಕಾಡಾನೆಯ ಸೆರೆಗೆ ಮುಂದಾದಾಗ ಆನೆಯೇ ಜೀವಂತ ಇರಲಿಲ್ಲ..!’

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಳ್ಳಿ ಗಿರಿಜನ ಹಾಡಿ ಹಿಂಬದಿಯ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಗುಂಡಿಗೆ ಬಿದ್ದು ಕೊನೆಯುಸಿರೆಳೆದ ಅಂದಾಜು ೩೦ ವರ್ಷ ಪ್ರಾಯದ ಹೆಣ್ಣಾನೆಯ ‘ಮೂರು ಗೆರೆಗಳ ಕಥಾನಕ!’ ಕಳೆದ ಒಂದೂವರೆ ತಿಂಗಳಿನಿAದಲೂ ಜನವಸತಿ ಪ್ರದೇಶದಲ್ಲಿ ಓಡಾಡಿಕೊಂಡಿದ್ದ ಕಾಡಾನೆಯನ್ನು ಕಂಡ ಸಾರ್ವಜನಿಕರು ಆರಂಭದಲ್ಲಿ ಆತಂಕಗೊAಡು, ಜನವಸತಿ ಪ್ರದೇಶಕ್ಕೆ ಬಂದಿರುವ ಆನೆಯನ್ನು ಅರಣ್ಯಕ್ಕೆ ಅಟ್ಟಿ ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಈ ಒತ್ತಾಯಕ್ಕೆ ಅರಣ್ಯ ಇಲಾಖೆ ಕ್ಯಾರೇ ಎನ್ನದ ಹಿನ್ನೆಲೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು.

ಕೆಲ ದಿನಗಳ ನಂತರ ಆನೆಯನ್ನು ಹತ್ತಿರದಿಂದ ಗಮನಿಸಿದ ಸಂದರ್ಭ ಅದರ ಒಂದು ಕಣ್ಣು ಸಂಪೂರ್ಣ ಮುಚ್ಚಿದ್ದು, ಮತ್ತೊಂದು ಕಣ್ಣಿನಲ್ಲಿ ದೃಷ್ಟಿದೋಷ ಹೊಂದಿರುವುದು ತಿಳಿದುಬಂತು. ಈ ಹಿನ್ನೆಲೆ ಸ್ಥಳೀಯರಿಗೆ ಕಾಡಾನೆಯ ಮೇಲೆ ಕರುಣೆ ಉಂಟಾಯಿತು. ಕಣ್ಣು ಕಾಣದ ಕಾಡಾನೆಯನ್ನು ಹೇಗಾದರೂ ರಕ್ಷಿಸಿ ಶಿಬಿರಕ್ಕೆ ಸಾಗಿಸಿ ಉಪಚರಿಸಿ ಎಂದು ಇಲಾಖೆಯನ್ನು ಮತ್ತೆ ಅಂಗಲಾಚಿದರು. ಆದರೂ ಆನೆಯಷ್ಟೇ ದಪ್ಪ ಚರ್ಮದ ಇಲಾಖೆಯವರ ಮನಸ್ಸು ಕರಗಲಿಲ್ಲ. ಅಂತಿಮವಾಗಿ ಕಣ್ಣು ಕಾಣದ ಹೆಣ್ಣು ಕಾಡಾನೆ ಹಾರಂಗಿ ಹಿನ್ನೀರು ಪ್ರದೇಶದ ಗುಂಡಿಗೆ ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿತು.

ಈ ಸಾವು ನ್ಯಾಯವೇ?: ದಷ್ಟÀಪುಷ್ಟವಾಗಿದ್ದ ಹೆಣ್ಣು ಕಾಡಾನೆ ಕಂಡು ಬಂದ ಸಂದರ್ಭವೇ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದರೆ ಅದರ ಜೀವ ಉಳಿಸಬಹುದಿತ್ತು. ಆಹಾರವಿಲ್ಲದೇ ನಿತ್ರಾಣಗೊಂಡ ಸ್ಥಿತಿಗೆ ತಲುಪಿದ ಸಂದರ್ಭ ಸೆರೆಗೆ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಕಣ್ಣೊರೆಸುವ ತಂತ್ರವನ್ನು ಇಲಾಖೆ ಮಾಡಿದೆ. ಕುರುಡಾನೆಯ ಈ ಸಾವು ನ್ಯಾಯವೇ? ಎಂದು ಇದೀಗ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಕೋಪ ಹೊರಹಾಕುತ್ತಿದ್ದಾರೆ.

ಆಹಾರವಿಲ್ಲದೇ, ಆಹಾರವನ್ನು ಅರಸಲಾಗದೇ ಚಿಂತಾಜನಕ ಸ್ಥಿತಿಗೆ ತಲುಪಿದ್ದ ಕಾಡಾನೆಯು ಗ್ರಾಮೀಣ ಪ್ರದೇಶದಲ್ಲೇ ಬೀಡುಬಿಟ್ಟಿದ್ದು, ಅಲ್ಪಸ್ವಲ್ಪ ಬಿದಿರು, ಹುಲ್ಲು ತಿನ್ನುತ್ತಾ ಜೀವ ಕೈಯಲ್ಲಿಡಿದುಕೊಂಡಿತ್ತು. ಒಂದು ಕಣ್ಣು ಸಂಪೂರ್ಣವಾಗಿ ಇಲ್ಲವಾಗಿದ್ದು, ಮತ್ತೊಂದು ಕಣ್ಣಿನಲ್ಲಿ ಪೊರೆ ಉಂಟಾದರಿAದ ಮಂದ ದೃಷ್ಟಿಯಲ್ಲಿಯೇ ಓಡಾಡಿಕೊಂಡಿತ್ತು. ಹಾರಂಗಿ ಹಿನ್ನೀರು ಪ್ರದೇಶದ ನೀರು ಕುಡಿದುಕೊಂಡು ಬೀಡುಬಿಟ್ಟಿತ್ತು. ಈ ಆನೆಯನ್ನು ಸೆರೆಹಿಡಿದು ಆರೈಕೆ ಮಾಡುವಂತೆ ಇಲಾಖೆಗೆ ಭಿನ್ನವಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆನೆ ಜನವಸತಿ ಪ್ರದೇಶಕ್ಕೆ ಬಂದಿರುವ ಹಿನ್ನೆಲೆ ಯಾರೋ ಗುಂಡು ಹಾರಿಸಿದ್ದಾರೆ. ಮೈಯಲ್ಲಿ ಗುಂಡಿನ ಕಲೆಗಳು ಇವೆ. ಕಣ್ಣು ಕಾಣದ ಹಿನ್ನೆಲೆ ಜನವಸತಿ ಪ್ರದೇಶದಲ್ಲಿ ಆಹಾರ ಅರಸಿದ ಕಾಡಾನೆ ಕೊನೆಗೆ ನಿತ್ರಾಣಗೊಂಡು ದುರಂತ ಅಂತ್ಯವಾಗಿರುವುದು ನೋವಿನ ಸಂಗತಿ. ಇಲಾಖೆಯ ಅಧಿಕಾರಿಗಳು ಮನಸ್ಸು ಮಾಡಿದ್ದರೆ ಆನೆಯನ್ನು ಬದುಕಿಸಿಕೊಳ್ಳಬಹುದಿತ್ತು ಎಂದು ಕೆಲ ಸಿಬ್ಬಂದಿಗಳೂ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ ಮರುದಿನವೇ, ನಿತ್ರಾಣಗೊಂಡ ಆನೆ ಗುಂಡಿಯಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂದರ್ಭ ಜೀವ ಉಳಿಸಿಕೊಂಡಿದ್ದ ಆನೆಯನ್ನು ಉಪಚರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ರಮಕೈಗೊಂಡಿದ್ದು, ಗ್ಲುಕೋಸ್ ಸೇರಿದಂತೆ ಇನ್ನಿತರ ಚಿಕಿತ್ಸೆ ನೀಡಿದರೂ ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಸಾವನ್ನಪ್ಪಿದೆ.

ದೃಷ್ಟಿದೋಷದ ಹಿನ್ನೆಲೆ ಸಮರ್ಪಕ ಆಹಾರವೂ ಇಲ್ಲದೇ ನಿತ್ರಾಣಗೊಂಡು, ಅಂತಿಮವಾಗಿ ನೋವಿನಿಂದ ಕೊನೆಯುಸಿರೆಳೆದ ಕಾಡಾನೆಯ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ನಾವುಗಳು ಮಾಹಿತಿ ನೀಡಿದ ಒಂದೆರಡು ದಿನಗಳಲ್ಲಿ ಆನೆಯನ್ನು ಸೆರೆಹಿಡಿದು ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿಯುತ್ತಿತ್ತು ಎಂದು ಅಭಿಪ್ರಾಯಿಸಿದ್ದಾರೆ. ಒಟ್ಟಾರೆ ಮೂಕಪ್ರಾಣಿಯು ಮೂಕವಾಗಿ ರೋಧಿಸಿ ಅನ್ನಾಹಾರವಿಲ್ಲದೇ ಅಂತಿಮವಾಗಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಈ ದುರಂತಕ್ಕೆ ಸ್ಥಳೀಯರ ಪ್ರಶ್ನೆಯೊಂದೇ- ಈ ಸಾವು ನ್ಯಾಯವೇ?

- ವಿಜಯ್