*ಗೋಣಿಕೊಪ್ಪ, ಡಿ. ೧೪: ಕೊಡವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನೀಡುತ್ತಿರುವ ಅನುದಾನವನ್ನು ಫೆಡರೇಷನ್ ಆಫ್ ಕೊಡವ ಸಮಾಜಕ್ಕೆ ಬಿಡುಗಡೆ ಮಾಡುವಂತೆ ಕೋರಿರುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಬಾರದು ಎಂದು ಯುನೈಟೆಡ್ ಕೊಡವ ಆರ್ಗನೈಸೇಶನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.
ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಬೊಮ್ಮಾಯಿ ಸರ್ಕಾರ ಘೋಷಿಸಿದ ರೂ. ೧೦ ಕೋಟಿ ಅನುದಾನದಲ್ಲಿ ಸಿಂಹಪಾಲು ೬ ಕೋಟಿಯನ್ನು ಕೊಡವ ಫೆಡರೇಷನ್ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡವ ಜನಾಂಗದ ಶ್ರೇಯೋಭಿವೃದ್ಧಿ ಅಂದರೆ, ಕೊಡವ ಸಮಾಜಗಳ ಒಕ್ಕೂಟವೆಂಬ ಹೈಟೆಕ್ ಸಂಸ್ಥೆಯ ಜೀರ್ಣೊದ್ಧಾರ ಅಲ್ಲ. ಕೊಡವರ ಸಾಮಾಜಿಕ, ಸಾಂಪ್ರದಾಯಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಯಾಗಬೇಕು. ಫೆಡರೇಷನ್ ಆಫ್ ಕೊಡವ ಸಮಾಜದ ವತಿಯಿಂದ ಹತ್ತು ಕೋಟಿಗಳಿಗೆ ನೀಡಿರುವ ಪ್ರಸ್ತಾವನೆಗಳಿಗೆ ಸರ್ಕಾರ ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದು ಹಾಗೂ ಹಣ ಬಿಡುಗಡೆಯನ್ನು ತಡೆಹಿಡಿಯಬೇಕು ಎಂದು ಚಿಣ್ಣಪ್ಪ ಒತ್ತಾಯಿಸಿದ್ದಾರೆ.
ಕೊಡವರ ಹೆಸರಿನಲ್ಲಿ ಬರುವ ಎಲ್ಲಾ ಸರ್ಕಾರಿ ಅನುದಾನಗಳು ಈ ಹೈಟೆಕ್ ಫೆಡರೇಷನ್ನಿನ ಪಾಲಾದರೆ, ಕೊಡವರ ಐನ್ಮನೆ, ಕೈಮಡ, ಮಂದ್ಮಾನಿಗಳ ಅಭಿವೃದ್ಧಿ ಹೇಗೆ ಸಾಧ್ಯ? ಕೊಡವರ ಅಸ್ತಿತ್ವವನ್ನು ಉಳಿಸಿ ಬೆಳೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಫೆಡರೇಷನ್ ಆಫ್ ಕೊಡವ ಸಮಾಜಕ್ಕೆ ಇದುವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಂದಿರುವ ಅನುದಾನಗಳ ಕುರಿತು ಮಾಹಿತಿ ನೀಡಲಿ; ಹಾಗೂ ಕೊಡವ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪಲಾಯನ ಮಾಡುವ ಇವರು ಕೊಡವರಿಗೆ ವಿವರಣೆ ನೀಡಲಿ ಎಂದು ಚಿಣ್ಣಪ್ಪ ಹೇಳಿದ್ದಾರೆ.
ಯುನೈಟೆಡ್ ಕೊಡವ ಆರ್ಗನೈಸೇಷನ್-ಯುಕೊ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಬೊಮ್ಮಾಯಿ ಸರ್ಕಾರ ರೂ. ೧೦ ಕೋಟಿ ಘೋಷಿಸಿದೆ. ಕೊಡವ ಜನಾಂಗದ ಐನ್ಮನೆ ಕೈಮಡ, ಮಂದ್ಮಾನಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಹಲವು ದಶಕಗಳ ಪ್ರಯತ್ನದ ಫಲವಾಗಿ ಸರ್ಕಾರ ಅನುದಾನ ನೀಡಿದೆ. ಶಾಸಕರಾದ ಪೊನ್ನಣ್ಣ, ಈ ಫೆಡರೇಷನ್ನ ಕುತಂತ್ರ ಅರ್ಥಮಾಡಿಕೊಳ್ಳಲಿ ಎಂದಿದ್ದಾರೆ.
ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಘೋಷಿಸಿರುವ ಅನುದಾನದಲ್ಲಿ, ನಿರ್ಮಾಣ ಹಂತದಲ್ಲಿರುವ ಗೋಣಿಕೊಪ್ಪ ಕೊಡವ ಸಮಾಜಕ್ಕೆ ಕನಿಷ್ಟ ಒಂದು ಕೋಟಿ ನೀಡಬೇಕು. ಉಳಿದಂತೆ ಮರೆನಾಡ್, ಚೆಯ್ಯಂಡಾಣೆ, ಮಕ್ಕಂದೂರ್, ಮಡಿಕೇರಿ ಹಾಗೂ ಹುಣಸೂರು ಪಕ್ಕದ ಚೌಡಿಕಟ್ಟೆ ಏಲಕ್ಕಿ ಕಟ್ಟೆ ಸೇರಿದಂತೆ ನಿರ್ಮಾಣ ಹಂತದಲ್ಲಿರುವ ೬ ಕೊಡವ ಸಮಾಜಗಳಿಗೆ ತಲಾ ೫೦ ಲಕ್ಷ ನೀಡಬೇಕು. ಕೊಡವ ಜನಾಂಗದಲ್ಲಿ ೭೦ಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಆಯ್ದ ೧೦ ಒಕ್ಕಗಳಲ್ಲಿ ಮಾದರಿಯಾಗಿ ನೂತನ ಐನ್ಮನೆ ನಿರ್ಮಿಸಲು ಎರಡು ಕೋಟಿ ಹಾಗೂ ಆಯ್ದ ಒಂದು ಸೀಮೆ ಮಂದ್ ಹಾಗೂ ಎರಡು ನಾಡ್ ಮಂದ್ಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ೧ ಕೋಟಿ ನೀಡಬೇಕು. ಉಳಿದ ೩ ಕೋಟಿಗಳನ್ನು, ಅವಶ್ಯಕತೆಗನುಸಾರ, ಚಟುವಟಿಕೆಯಿಂದ ಕೂಡಿರುವ ಕೊಡವ ಸಮಾಜಗಳನ್ನು ಗುರುತಿಸಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಚೆಪ್ಪುಡೀರ ಸುಜು ಕರುಂಬಯ್ಯ ಇದ್ದರು.