ಸೋಮವಾರಪೇಟೆ, ಡಿ. ೧೪: ಅಜಾಗರೂಕತೆಯ ಚಾಲನೆಯಿಂದಾಗಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಾರನ್ನು ಡಿಕ್ಕಿ ಹೊಡೆದು, ನಂತರ ಎದುರಿಗಿದ್ದ ಪಾದಚಾರಿಗೂ ಗುದ್ದಿ, ಅಂತಿಮವಾಗಿ ಕಂದಕಕ್ಕೆ ಜಿಗಿದು ಪಲ್ಟಿಯಾದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಮೂವರು ಪಾರಾಗಿರುವ ಘಟನೆ ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇಂದು ಸಂಜೆ ಸಂಭವಿಸಿದೆ.

ಪಟ್ಟಣದ ಮಾರ್ಕೆಟ್ ಏರಿಯಾ ನಿವಾಸಿ ಗಣೇಶ್ ಎಂಬವರಿಗೆ ಸೇರಿದ ಆಲ್ಟೋ ಕಾರನ್ನು ತೋಳೂರುಶೆಟ್ಟಳ್ಳಿ ದೊಡ್ಡತೋಳೂರಿನ ಶಿವರಾಜ್ ಎಂಬಾತ ಚಾಲಿಸಿಕೊಂಡು ಬಂದಿದ್ದು, ವಿವೇಕಾನಂದ ವೃತ್ತದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯಲ್ಲಿ ಬರುತ್ತಿದ್ದ ಆಲೇಕಟ್ಟೆ ನಿವಾಸಿ ನಾರಾಯಣ ಎಂಬವರಿಗೆ ಡಿಕ್ಕಿಪಡಿಸಿದ್ದಾರೆ.

ಅಂತಿಮವಾಗಿ ನಿಯಂತ್ರಣ ಕಳೆದುಕೊಂಡ ಕಾರು, ಸುಮಾರು ೧೫ ಅಡಿ ಆಳದ ಕಂದಕಕ್ಕೆ ನುಗ್ಗಿ ಪಲ್ಪಿಯಾಗಿದೆ. ಈ ಸಂದರ್ಭ ಸ್ಥಳೀಯರು ಧಾವಿಸಿ ನಾರಾಯಣ ಅವರನ್ನು ಮೇಲೆತ್ತಿ ಆ್ಯಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಿಂದ ನಾರಾಯಣ ಅವರ ತಲೆ ಭಾಗಕ್ಕೆ ಗಾಯವಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಕಂದಕದೊಳಗೆ ಪಲ್ಪಿಯಾಗಿದ್ದ ಕಾರನ್ನು ಮೇಲೆತ್ತಿ ಅದರೊಳಗೆ ಸಿಲುಕಿದ್ದ ಚಾಲಕ ಶಿವರಾಜ್ ಹಾಗೂ ಹಿಂಬದಿಯಿದ್ದ ಗಣೇಶ್ ಅವರನ್ನು ಹೊರಗೆಳೆದು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಾಂತಳ್ಳಿ ಮಾರ್ಗದಿಂದ ಬರುತ್ತಿದ್ದ ಆಲ್ಟೋ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಸುರಕ್ಷತಾ ಕ್ರಮಕ್ಕೆ ಆಗ್ರಹ: ವಿವೇಕಾನಂದ ವೃತ್ತವು ಸಂಚಾರ ಸೂಕ್ಷö್ಮ ಪ್ರದೇಶವಾಗಿದ್ದು, ಕುಶಾಲನಗರ, ಮಡಿಕೇರಿಯಿಂದ ಪಟ್ಟಣಕ್ಕೆ ಆಗಮಿಸುವ-ಪಟ್ಟಣದಿಂದ ಮಡಿಕೇರಿ, ಶಾಂತಳ್ಳಿ ಭಾಗಕ್ಕೆ ತೆರಳುವ ಕೂಡು ರಸ್ತೆಯಾಗಿದೆ. ಇದರ ಒಂದು ಬದಿಯಲ್ಲಿ ಸುಮಾರು ೧೫ ಅಡಿಯಷ್ಟು ಗುಂಡಿಯಿದ್ದು, ಕೆಳಭಾಗದಲ್ಲಿ ಮನೆಗಳು, ಮಾಂಸದAಗಡಿಗಳಿವೆ.

ಇದರೊಂದಿಗೆ ಇದೇ ಜಂಕ್ಷನ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್‌ಗಾಗಿ ಕಾಯುತ್ತಿರುತ್ತಾರೆ. ಮಾಂಸ ಖರೀದಿಗೆ ಬರುವವರು ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲುಗಡೆಗೊಳಿಸುತ್ತಾರೆ. ಇಂದೂ ಸಹ ದ್ವಿಚಕ್ರ ವಾಹನ ನಿಲ್ಲಿಸಿ ಅಂಗಡಿಗೆ ತೆರಳಿದ್ದರಿಂದ ಯುವಕನೋರ್ವನ ಪ್ರಾಣ ಉಳಿದಿದೆ.

ಸಂಚಾರ ಸೂಕ್ಷö್ಮವಾಗಿರುವ ಈ ಸ್ಥಳದಲ್ಲಿ ವೇಗ ನಿಯಂತ್ರಣಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೇ ರಸ್ತೆಯ ಬದಿಯಲ್ಲಿ ತಡೆ ಕಂಬಿಗಳನ್ನೂ ಅಳವಡಿಸದೇ ಲೋಕೋಪಯೋಗಿ ಇಲಾಖೆ ನಿರ್ಲಕ್ಷö್ಯತೆ ತೋರಿದೆ ಎಂದು ಘಟನೆಯ ನಂತರ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ ೫.೨೦ಕ್ಕೆ ಘಟನೆ ನಡೆದಿದೆ. ಒಂದು ವೇಳೆ ಶಾಲಾ - ಕಾಲೇಜು ತರಗತಿ ಮುಗಿಯುವ ಸಮಯದಲ್ಲಿ ಘಟನೆ ಸಂಭವಿಸಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಇದೇ ಸ್ಥಳದಲ್ಲಿ ಹತ್ತಾರು ವಿದ್ಯಾರ್ಥಿಗಳು ಪ್ರತಿದಿನ ಬಸ್‌ಗಾಗಿ ಕಾಯುವುದು ಮಾಮೂಲಿಯಾಗಿದೆ. ಮುಂದಾಲೋಚನೆ ಮಾಡಿ ಲೋಕೋಪಯೋಗಿ ಇಲಾಖೆ ರಸ್ತೆಯ ಒಂದು ಬದಿಯಲ್ಲಿ ತಡೆಕಂಬಿಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.