ಕಣಿವೆ, ಡಿ. ೧೪: ಕುಶಾಲನಗರ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗೆ ಶಾಶ್ವತವಾದ ಶುದ್ಧ ಕುಡಿಯುವ ನೀರಿನ ಯೋಜನೆಗೆ ೪೦ ಕೋಟಿ ರೂಗಳ ಯೋಜನೆ ಅನುಷ್ಠಾನ ಗೊಂಡಿರುವುದಾಗಿ ಕುಶಾಲನಗರದ ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

‘ಶಕ್ತಿ’ಯಲ್ಲಿ ಪ್ರಕಟವಾದ ‘ಮೇಲ್ದರ್ಜೆಗೇರದ ಕುಶಾಲನಗರದ ಜಲಮಂಡಳಿ ಯೋಜನೆ’ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದ ಜಲಮಂಡಳಿ ಅಧಿಕಾರಿ ಆನಂದ ಕುಮಾರ್, ಹೆಚ್ಚು ಜನಸಂಖ್ಯೆಯುಳ್ಳ ಕುಶಾಲನಗರ ಪಟ್ಟಣದ ನಿವಾಸಿಗಳಿಗೆ ವರ್ಷದ ಎಲ್ಲಾ ಋತು ಮಾನಗಳಲ್ಲೂ ಕುಡಿಯುವ ನೀರಿಗೆ ತೊಂದರೆಯಾಗ ದಂತೆ ಸರ್ಕಾರಕ್ಕೆ ಸಲ್ಲಿಸಿದ್ದ ೪೦ ಕೋಟಿ ರೂ. ಗಳ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗೆ ಆಡಳಿತಾತ್ಮಕ ವಾದ ಮಂಜೂರಾತಿ ದೊರೆತಿದೆ. ಬೇಸಿಗೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿದಲ್ಲಿ ಹಾರಂಗಿಯಿAದ ನೀರು ಪಡೆಯುವ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಜಲಮೂಲವಾದ ಕಾವೇರಿ ನದಿ ಒಂದು ವೇಳೆ ಕೈಕೊಟ್ಟರೆ ಬದಲೀ ಮತ್ತೊಂದು ನದಿಯಿಂದ ನೀರು ಪೂರೈಕೆ ಮಾಡಿಕೊಳ್ಳ ಬಹುದಾದ ಹಾರಂಗಿ ಹಾಗೂ ಕಾವೇರಿ ಪವಿತ್ರ ನದಿಗಳ ಸಂಗಮ ಸ್ಥಾನ ಹಳೆ ಕೂಡಿಗೆಯ ಕಾವೇರಿ ನದಿಯಿಂದ ಕುಶಾಲನಗರಕ್ಕೆ ಸರಬರಾಜು ಯೋಜನೆ ಇದಾಗಿದೆ.

ಕೂಡಿಗೆಯಿಂದ ಕುಶಾಲನಗರದ ಜಲಮಂಡಳಿಯತನಕ ಹೊಸದಾದ ಪೈಪುಗಳ ಮಾರ್ಗದಿಂದ ನೀರು ಸರಬರಾಜು ಮಾಡಿಕೊಳ್ಳುವಂತಹ ಕೇಂದ್ರ ಸರ್ಕಾರದ ಅಮೃತ - ೨ ಎಂಬ ಹೆಸರಿನ ಯೋಜನೆ ಎಂದು ಆನಂದ ಕುಮಾರ್ ಮಾಹಿತಿ ನೀಡಿದ್ದಾರೆ.

೨೦ : ೧೬ : ೦೪ ಕೋಟಿ

ರೂ. ಗಳ ಯೋಜನೆ

ಗ್ರಾಮೀಣ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ (ಜೆಜೆಎಂ) ಮಾದರಿಯಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳ ಜನರಿಗೆ ಇದೇ ಕೇಂದ್ರ ಸರ್ಕಾರ ರೂಪಿಸಿರುವ ಅಮೃತ್ - ೨ ಯೋಜನೆ ಇದಾಗಿದೆ. ಇಲ್ಲಿ ೪೦ ಕೋಟಿ ರೂ. ಗಳ ಯೋಜಿತ ಈ ಯೋಜನೆಗೆ ಕೇಂದ್ರ ಸರ್ಕಾರ ೨೦ ಕೋಟಿ ರೂ. ಗಳನ್ನು ನೀಡುತ್ತದೆ. ಹಾಗೆಯೇ ರಾಜ್ಯ ಸರ್ಕಾರ ೧೬ ಕೋಟಿ ನೀಡಬೇಕಿದೆ. ಉಳಿದಂತೆ ೪ ಕೋಟಿ ರೂ. ಗಳನ್ನು ಸ್ಥಳೀಯ ಪುರಸಭೆ ಭರಿಸುವ ಯೋಜನೆ ಇದಾಗಿದೆ ಎಂದು ಆನಂದ್ ಮಾಹಿತಿ ನೀಡಿದರು.

ರಾಜ್ಯದ ಪಾಲು ಬಿಡುಗಡೆಯಾದಲ್ಲಿ

ಕೇಂದ್ರದ ಅನುದಾನ

ಉದ್ದೇಶಿತ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಪಾಲಿನ ೨೦ ಕೋಟಿ ರೂ. ಗಳ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ಪಾಲಿನ (ಮೊದಲ ಪುಟದಿಂದ) ಹಣ ಬಿಡುಗಡೆಯಾದರೆ ಮಾತ್ರ ಕೇಂದ್ರದ ಪಾಲು ಬಿಡುಗಡೆ ಯಾಗಲಿದೆ ಎಂಬ ಅಂಶ ಇಲ್ಲಿ ಅಚ್ಚರಿ ಮೂಡಿಸುವ ಅಂಶವಾಗಿದೆ. ಅಂದರೆ, ರಾಜ್ಯ ಸರ್ಕಾರ ತನ್ನ ಚುನಾವಣಾ ಪೂರ್ವದಲ್ಲಿನ ಉಚಿತ ಯೋಜನೆಗಳನ್ನು ಪೂರೈಸಲು ಹಣ ವ್ಯಯಿಸುತ್ತಿರುವುದರಿಂದ ಉಳಿದೆಲ್ಲಾ ಇತರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೇಳಬೇಡಿ ಎಂದು ಶಾಸಕರಿಗೆ ಸೂಚಿಸಿರುವುದರಿಂದ ರಾಜ್ಯ ಸರ್ಕಾರ ೧೬ ಕೋಟಿ ರೂಗಳನ್ನು ಬಿಡುಗಡೆ ಗೊಳಿಸಬಲ್ಲುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಕುಶಾಲನಗರ ಪುರಸಭೆಗೂ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಆಗದೇ ಇರುವುದರಿಂದ ಸ್ಥಳೀಯ ಸಂಸ್ಥೆಯಿAದ ನೀಡಬೇಕಾದ ಅನುದಾನದ ಸ್ಥಿತಿ - ಗತಿ ಎತ್ತ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತಿದೆ.

೬೦ ಸಾವಿರ ಮಂದಿಗೆ ನೀರು

ಕುಶಾಲನಗರದಲ್ಲಿ ಜಾರಿಯಾಗಿರುವ ನೂತನ ಯೋಜನೆಯು ಭವಿಷ್ಯದಲ್ಲಿ ಅಂದರೆ ಮುಂದಿನ ೩೦ ವರ್ಷಗಳಲ್ಲಿ ಏರಿಕೆಯಾಗಬಹುದಾದ ಕುಶಾಲನಗರದ ೬೦ ಸಾವಿರ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸಬಹುದಾದ ಯೋಜನೆಯಾಗಿದೆ. ಈಗಾಗಲೇ ಕುಶಾಲನಗರದಲ್ಲಿ ಇರುವ ಯೋಜನೆ ಹಳೆಯ ಯೋಜನೆಯಾಗಿದೆ. ಇದರಿಂದ ಕುಶಾಲನಗರ ಹಾಗೂ ಮುಳ್ಳುಸೋಗೆಯ ೩೦ ಸಾವಿರ ಜನಸಂಖ್ಯೆಗೆ ಪ್ರತಿ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.

ಹಾಗಾಗಿ ೪೦ ಕೋಟಿ ರೂಗಳ ಯೋಜನೆ ಜಾರಿಯಾದಲ್ಲಿ ಕೂಡಿಗೆಯ ನದಿಗಳ ಸಂಗಮದಿAದ ಕುಶಾಲನಗರದವರೆಗೆ ಹೆದ್ದಾರಿಯ ಬದಿಯಲ್ಲಿ ಹೊಸ ಪೈಪ್ ಲೈನಿಂಗ್ ಅಳವಡಿಸಿ ನೀರು ಸರಬರಾಜು ಮಾಡಿಕೊಳ್ಳಬಹುದಾಗಿದೆ.

ಯೋಜನೆ ದುಪ್ಪಟ್ಟಾಗದಂತೆ ಶ್ರಮವಹಿಸುವರೇ

ಕುಶಾಲನಗರದಲ್ಲಿ ಪ್ರಸಕ್ತ ಜಾರಿಯಾಗಿರುವ ೪೦ ಕೋಟಿ ರೂಗಳ ಈ ಯೋಜನೆ ಸಕಾಲದಲ್ಲಿ ಜಾರಿಯಾಗದೇ ಒಂದು ವೇಳೆ ಅನುದಾನ ಬಿಡುಗಡೆಯ ವಿಳಂಬದಿAದಾಗಿ ಮೀನಾಮೇಷವಾದಲ್ಲಿ ೪೦ ಕೋಟಿಯ ಯೋಜನೆ ದುಪ್ಪಟ್ಟಾಗುವ ಆತಂಕವನ್ನು ಮನಗಂಡು ಆಡಳಿತಾರೂಢರು ಯೋಜನೆಯನ್ನು ಅನುಷ್ಠಾನ ಮಾಡಬೇಕಿದೆ. ಏಕೆಂದರೆ ಈಗಾಗಲೇ ಕುಶಾಲನಗರದಲ್ಲಿ ಆರಂಭ ಶೂರತನ ತೋರಿ ಜಾರಿಯಾಗಿರುವ ಯೋಜನೆಗಳು ಹಳ್ಳಹಿಡಿದು ಆಮೆಗತಿಯಲ್ಲಿ ಸಾಗುತ್ತಾ ದಶಕಗಳು ಕಳೆದರೂ ಇನ್ನೂ ಕೂಡ ಪೂರ್ಣಗೊಳ್ಳದ ಅನೇಕ ಯೋಜನೆಗಳ ಪಟ್ಟಿಗೆ ಈ ಕುಡಿಯುವ ನೀರಿನ ಯೋಜನೆ ಸೇರದಂತೆ ಆಡಳಿತಾರೂಢರು ಎಚ್ಚರಿಕೆ ವಹಿಸಬೇಕಿದೆ.

ಈ ಬಗ್ಗೆ ಶಾಸಕರಾದ ಡಾ. ಮಂಥರಗೌಡರ ಬಳಿ ‘ಶಕ್ತಿ’ ಪ್ರತಿಕ್ರಿಯೆ ಬಯಸಿದಾಗ ೪೦ ಕೋಟಿ ರೂ.ಗಳ ಯೋಜನೆಗೆ ಶೀಘ್ರದಲ್ಲಿ ಕೂಡಿಗೆಯ ಸಂಗಮದಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ರಾಜ್ಯದ ಪಾಲಿನ ೧೬ ಕೋಟಿಯ ಜೊತೆಗೆ ಸ್ಥಳೀಯ ಸಂಸ್ಥೆ ನೀಡಬೇಕಾದ ೪ ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಶ್ರಮಿಸಲಾಗುತ್ತದೆ.

ಜನರಿಗೆ ಅಗತ್ಯವಾಗಿ ಬೇಕಾದ ಪ್ರಮುಖ ಮೂಲ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಯೋಜನೆಗೆ ಅನುದಾನ ತಂದೇ ತೀರುತ್ತೇನೆ ಎಂದರು. ಒಟ್ಟಾರೆ, ಕುಶಾಲನಗರದ ಹೊಸದಾದ ಕುಡಿಯುವ ನೀರಿನ ಈ ಯೋಜನೆ ಯಾವ ವಿಘ್ನಗಳೂ ಬಾಧಿಸದೇ ಫಲಪ್ರದವಾಗಬೇಕಿದೆ ಅಷ್ಟೇ. - ಕೆ.ಎಸ್. ಮೂರ್ತಿ