ವೀರಾಜಪೇಟೆ, ಡಿ. ೧೫: ಕೊಡಗು ರೈತ ಸಂಘಟನೆಯ ವತಿಯಿಂದ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಾಮಚಂದ್ರ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ನಡೆಸಲಾಯಿತು. ರೈತ ಸಂಘಟನೆಯ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ರೈತರು ಭಾಗವಹಿಸಿದ್ದರು.

ಸಂಘಟನೆಯ ಪ್ರಮುಖ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ ತಾಲೂಕು ಕಚೇರಿಯಲ್ಲಿ ರೈತರಿಗೆ ತಮ್ಮ ಭೂಮಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಕಚೇರಿಯಲ್ಲಿ ವಿಳಂಬ ನೀತಿ ಅನುಸರಿಸುವುದು, ರೈತರನ್ನು ಅಲೆದಾಡಿಸುವಂತಹ ಅನೇಕ ಸಮಸ್ಯೆಗಳಿವೆ ಎಂದು ಕಡತಗಳನ್ನು ವಿಲೇವಾರಿ ಮಾಡದೇ ದಿನಗಳನ್ನು ಮುಂದಕ್ಕೆ ದೂಡುವುದು, ಲಂಚ ಕೊಟ್ಟರೆ ಇಲ್ಲಿ ಎಲ್ಲಾ ರೀತಿಯ ಕೆಲಸಗಳು ಆಗುತ್ತವೆ. ಈ ಬಗ್ಗೆ ಗಮನ ಹರಿಸುವಂತೆ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ವೀರಾಜಪೇಟೆ ತಾಲೂಕಿನಲ್ಲಿ ಕೆಲವು ಬಗೆಹರಿಸಲು ಸಾಧ್ಯವಾಗದ ಸಮಸ್ಯೆ ಇದೆ, ತನ್ನ ವ್ಯಾಪ್ತಿಗೆ ಬರುವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಲಾಗುವುದು. ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದರೆ ಏನು ಮಾಡಲು ಸಾಧ್ಯವಿಲ್ಲ. ಪಿ೧ ಪಿ೨ ಸಮಸ್ಯೆಗಳ ಬಗ್ಗೆ ತಮ್ಮ ಕಚೇರಿಯಲ್ಲಿ ೧೩೪೦ ಕಡತಗಳು ಇವೆ. ಇದರ ಬಗ್ಗೆ ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಕಂದಾಯ ಸಚಿವರು ಈ ವಿಚಾರದ ಬಗ್ಗೆ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಉತ್ತರ ಫಲಿತಾಂಶ ನೀಡುತ್ತಾರೆ. ಇದರ ಬಗ್ಗೆ ಶಾಸಕ ಎ.ಎಸ್ ಪೊನ್ನಣ್ಣ, ಅವರು ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ ತಾರ್ಕಿಕ ಅಂತ್ಯದ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು,

ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ ತಾಲೂಕು ಕಚೇರಿಯಲ್ಲಿ ವಿಳಂಬ ನೀತಿ ಅನುಸರಿಸುವ, ರೈತರನ್ನು ಸತಾಯಿಸುವ ನೌಕರರಿಗೆ ಎಚ್ಚರಿಕೆ ನೀಡುವಂತೆ, ಹಾಗೂ ತಪ್ಪಿತಸ್ಥರೆಂದು ಕಂಡುಬAದರೆ ಅವರ ಮೇಲೆ ಕಟ್ಟುನಿಟ್ಟಾಗಿ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ವಕೀಲರಾದ ಹೇಮಚಂದ್ರ ಮಾತನಾಡಿ, ಸರ್ವೆ ಇಲಾಖೆಯ ಸಿಬ್ಬಂದಿ, ಕಡತ ವಿಲೇವಾರಿ ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆ ಬಗ್ಗೆ ಕ್ರಮವನ್ನು ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಿದರು. ಅನೇಕ ವರ್ಷಗಳಿಂದ ಕೆಲವು ಕಡತಗಳು ನೆನೆಗುದಿಗೆ ಬಿದ್ದಿವೆ. ಕೆಲವು ಕಡತಗಳು ನಾಪತ್ತೆಯಾಗಿದ್ದು ಇಲಾಖೆಯ ಸಿಬ್ಬಂದಿಗಳೆ ನೇರ ಕಾರಣ ಎಂದು ಆರೋಪಿಸಿದರು.

ಉಪ ತಹಶೀಲ್ದಾರ್ ಪ್ರದೀಪ್, ವೀರಾಜಪೇಟೆ ಕಂದಾಯ ಅಧಿಕಾರಿ ಎಂ.ಎಲ್. ಹರೀಶ್, ಅಮ್ಮತಿ ವಿಭಾಗದ ಕಂದಾಯ ಅಧಿಕಾರಿ ಅನಿಲ್, ವೀರಾಜಪೇಟೆ ಹಾಗೂ ಪೊನ್ನಂಪೇಟೆ ಗ್ರಾಮ ಲೆಕ್ಕಿಗರು, ರೈತ ಸಂಘಟನೆಯ ಭವಿಕುಮಾರ್, ಪೊನ್ನಪ್ಪ, ಸುಭಾಶ್ ಸುಬ್ಬಯ್ಯ, ಸಬಿತ ಭೀಮಯ್ಯ, ಚೆಂಗಪ್ಪ, ಆಲೆಮಾಡ ಮಂಜುನಾಥ, ಪಿ.ಡಿ ಅಚ್ಚಪ್ಪ, ಕಂಬ ಕಾರ್ಯಪ್ಪ, ತೀತಿಮಾಡ ರಾಜ, ವಿಕ್ರಮ ಬಿದ್ದಪ್ಪ ಸೇರಿದಂತೆ ಹಲವಾರು ರೈತರು, ತಾಲೂಕು ಕಚೇರಿಯ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.