ಸೋಮವಾರಪೇಟೆ, ಡಿ. ೧೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಅಂಗಡಿ ಮಳಿಗೆ ಹರಾಜು ವಿಚಾರದಲ್ಲಿ, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಆಡಳಿತಾಧಿಕಾರಿಗಳ ನಡುವೆ ಪಂಚಾಯಿತಿ ಮುಂಭಾಗವೇ ಸಾರ್ವಜನಿಕರೆದುರು ಜಟಾಪಟಿ ನಡೆಯಿತು.

ಟೆಂಡರ್ ಕರೆಯುವ ವಿಚಾರಕ್ಕೆ ಸಂಬAಧಿಸಿದAತೆ ಸದಸ್ಯರನ್ನು ಕಡೆಗಣಿಸಲಾಗಿದೆ. ಸಭೆಯಲ್ಲಿ ಆದ ತೀರ್ಮಾನವನ್ನು ಕತ್ತಲಲ್ಲಿಟ್ಟು, ತಪ್ಪು ನಿರ್ಣಯ ದಾಖಲು ಮಾಡಿ, ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಗೊಳಿಸಲಾಗಿದೆ ಎಂಬ ವಿಚಾರವನ್ನು ಮುಂದಿಟ್ಟುಕೊAಡು ಪಕ್ಷಾತೀತವಾಗಿ ಸದಸ್ಯರುಗಳು ಒಂದಾಗಿ, ಪಂಚಾಯಿತಿ ಆವರಣ ದಲ್ಲೇ ಆಡಳಿತಾಧಿಕಾರಿಯಾಗಿರುವ ತಾಲೂಕು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೆ.೧೩ರಂದು ನಡೆದ ಸಾಮಾನ್ಯಸಭೆಯಲ್ಲಿ ಟೆಂಡರ್ ವಿಚಾರ ಪ್ರಸ್ತಾಪವಾಗಿ ಸುದೀರ್ಘ ಚರ್ಚೆ ನಡೆದು, ನಗರದ ಅಭಿವೃದ್ಧಿ ಹಾಗೂ (ಮೊದಲ ಪುಟದಿಂದ) ವರ್ತಕರ ಹಿತದೃಷ್ಟಿಯಿಂದ ಸರ್ಕಾರದ ಅಭಿಪ್ರಾಯ ಪಡೆದು ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುವ ಬಗ್ಗೆ ತೀರ್ಮಾನಿಸಿದ್ದರೂ, ಏಕಾಏಕಿ ಹರಾಜಿಗೆ ದಿನಾಂಕ ನಿರ್ಧರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರುಗಳು, ಇಂದು ಬೆಳಿಗ್ಗೆ ಪಂಚಾಯಿತಿಯ ಮುಖ್ಯದ್ವಾರಕ್ಕೆ ಕುರ್ಚಿಗಳನ್ನು ಅಡ್ಡ ಇಟ್ಟು, ಬಾಗಿಲಲ್ಲೇ ಪ್ರತಿಭಟನೆ ನಡೆಸಿದರು.

ಚುನಾಯಿತ ಸದಸ್ಯರ ಅಭಿಪ್ರಾಯಗಳಿಗೆ ಆಡಳಿತಾಧಿಕಾರಿಗಳು ಬೆಲೆ ನೀಡಿಲ್ಲ. ಸಭೆಯಲ್ಲಿ ಆಗಿರುವ ನಿರ್ಣಯವನ್ನೇ ತಿದ್ದಿ, ತಮ್ಮಿಷ್ಟದಂತೆ ನಿರ್ಣಯಗಳನ್ನು ದಾಖಲಿಸಿಕೊಂಡು ಟೆಂಡರ್‌ಗೆ ದಿನಾಂಕ ಮಾಡಿರುವುದು ಸರಿಯಲ್ಲ. ಈ ನಡುವೆ ಎರಡು ಬಾರಿ ಸಾಮಾನ್ಯಸಭೆಯನ್ನು ಕರೆದು ನಂತರ ಮುಂದೂಡಲಾಗಿದೆ. ಆಡಳಿತಾಧಿಕಾರಿಗಳ ಏಕಪಕ್ಷೀಯ ನಿರ್ಧಾರದಿಂದ ಈಗಾಗಲೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಮಂದಿಗೆ ತೊಂದರೆಯಾಗಿದೆ ಎಂದು ಸದಸ್ಯರುಗಳು ಆರೋಪಿಸಿ, ಆಡಳಿತಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಟೆಂಡರ್ ಪ್ರಕ್ರಿಯೆಯನ್ನು ನಡೆಸಬಾರದೆಂದು ನಾವುಗಳು ಎಲ್ಲೂ ಹೇಳಿಲ್ಲ. ಅಂದಿನ ಸಭೆಯಲ್ಲಿ ಶಾಸಕ ಮಂಥರ್ ಗೌಡ ಅವರ ಉಪಸ್ಥಿತಿಯಲ್ಲಿ ಟೆಂಡರ್ ವಿಚಾರ ಚರ್ಚೆಗೆ ಬಂದಿದ್ದು, ಈ ಸಂದರ್ಭ ಮಾನವೀಯತೆಯ ನೆಲೆಗಟ್ಟಿನಲ್ಲಿ ಈಗಿರುವ ವರ್ತಕರಿಂದ ಬಾಡಿಗೆ ಮತ್ತು ಮುಂಗಡ ಹಣ ಹೆಚ್ಚು ಮಾಡಿ ಅವರುಗಳಿಗೆ ಮಳಿಗೆ ನೀಡಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದು, ಅಲ್ಲಿಂದ ಬರುವ ಉತ್ತರವನ್ನು ಆಧರಿಸಿ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಇದನ್ನು ಬದಿಗಿಟ್ಟು ಆಡಳಿತಾಧಿಕಾರಿಗಳೇ ತಾ. ೨೧ರಂದು ಟೆಂಡರ್ ನಡೆಸಲು ತೀರ್ಮಾನಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ನಿಗದಿಮಾಡಿದ್ದ ಎರಡು ಸಭೆಗಳನ್ನು ಮುಂದೂಡಿದ್ದಾರೆ. ಇದರಿಂದಾಗಿ ಸದಸ್ಯರ ಅಭಿಪ್ರಾಯ ತಿಳಿಸಲು ಅವಕಾಶವಾಗಿಲ್ಲ. ಹಾಗಾಗಿ ಹಿಂದಿನ ಸಭೆಯ ನಿರ್ಣಯ ರದ್ದುಪಡಿಸಿ, ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು. ಶೀಘ್ರವಾಗಿ ಸಾಮಾನ್ಯ ಸಭೆ ಕರೆಯಬೇಕೆಂದು ಒತ್ತಾಯಿಸಿ ಸದಸ್ಯರು ಪ್ರತಿಭಟನೆ ಮುಂದು ವರೆಸಿದರು.

ಕೆಲ ಸಮಯದ ನಂತರ ಸ್ಥಳಕ್ಕಾಗಮಿಸಿದ ಆಡಳಿತಾಧಿಕಾರಿ ನರಗುಂದ್ ಅವರು, ನಿಯಮದಂತೆಯೇ ಟೆಂಡರ್ ಕರೆಯಲಾಗಿದೆ ಎಂದು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಈ ಸಂದರ್ಭ ಪಂಚಾಯಿತಿಯ ಸದಸ್ಯರುಗಳು ಮಾತಿನಲ್ಲೇ ಆಡಳಿತಾಧಿಕಾರಿ ವಿರುದ್ಧ ಮುಗಿಬಿದ್ದರು.

ಸಭಾನಿರ್ಣಯವನ್ನು ತಿರುಚಿ ಸತ್ಯವನ್ನು ಮರೆಮಾಚಿ ಇದೀಗ ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದೀರಾ? ಎಂದು ಜೋರು ದನಿಯಲ್ಲಿ ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಂತರ ಕೆಲಕಾಲ ಸದಸ್ಯರುಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಇನ್ನೆರಡು ದಿನಗಳಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಜನಪ್ರತಿನಿಧಿಗಳನ್ನು ಒಳಗೊಂಡAತೆ ಸಭೆ ಕರೆಯಲಾಗುವುದು. ಅಂದಿನ ಸಭೆಯಲ್ಲಿ ಚರ್ಚೆ ನಡೆಸುವ ಬಗ್ಗೆ ಆಡಳಿತಾಧಿಕಾರಿಗಳು ತಿಳಿಸಿದ ನಂತರ ಪ್ರತಿಭಟನೆ ಸ್ಥಗಿತಗೊಂಡಿತು.

ಪAಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಪಿ.ಕೆ. ಚಂದ್ರು, ಸಂಜೀವ, ಶೀಲಾ ಡಿಸೋಜ, ಬಿ.ಆರ್. ಮೃತ್ಯುಂಜಯ, ನಾಗರತ್ನ, ಜೀವನ್, ಬಿ.ಆರ್. ಮಹೇಶ್, ಶುಭಕರ್, ಮೋಹಿನಿ ಅವರುಗಳು ಭಾಗವಹಿಸಿದ್ದರು.