ನಾಪೋಕ್ಲು, ಡಿ. ೧೪: ಎರಡು ದಿನಗಳ ಕಾಲ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸನಿವಾಸ ಶಿಬಿರ ಮುಕ್ತಾಯಗೊಂಡಿತು.

ಶಾಲೆಯ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಧನಂಜಯ ಎಂ. ವಹಿಸಿ ಕಾರ್ಯಕ್ರಮಕ್ಕೆ ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ರೂಪುಗೊಳ್ಳುವುದರೊಂದಿಗೆ ಜೀವನ ಕೌಶಲ್ಯಗಳನ್ನು ತಿಳಿದುಕೊಂಡು ಬಾಳಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ಸಿಗುವಂತಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಧ್ವಜಾರೋಹಣದೊಂದಿಗೆ ಉದ್ಘಾಟಿಸಿ ನುಡಿಯಾಡಿದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್., ಮಕ್ಕಳು ಬಾಲ್ಯದಲ್ಲಿಯೇ ಶಿಸ್ತು ಮತ್ತು ಮೌಲ್ಯಗಳನ್ನು ರೂಪಿಸಿಕೊಳ್ಳಲು ಈ ಶಿಬಿರ ಸಹಕಾರಿ. ಬೌದ್ಧಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಪ್ರತಿ ಮಗುವು ಉತ್ತಮ ನಾಗರಿಕನಾಗಲು ಸಾಧ್ಯ ಎಂದು ನುಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕಿ ದಮಯಂತಿ ಯು.ಸಿ. ದ್ವಿತೀಯ ಸೋಪಾನ ಮತ್ತು ತೃತೀಯ ಸೋಪಾನ ಪರೀಕ್ಷೆಗಳ ಮಾಹಿತಿ ನೀಡಿದರು. ಈ ಸಂದರ್ಭ ವೀರ ಮರಣವನ್ನಪ್ಪಿದ ಕ್ಯಾ. ಪ್ರಾಂಜಲ್ ಭಾವಚಿತ್ರಕ್ಕೆ ಹಣತೆ ಹಚ್ಚಿ, ಪುಷ್ಪ ನಮನ ಸಲ್ಲಿಸುವುದರೊಂದಿಗೆ ಸಾವನ್ನಪ್ಪಿದ ಅರ್ಜುನ ಆನೆ ಮತ್ತು ಕನ್ನಡದ ಹಿರಿಯ ನಟಿ ಲೀಲಾವತಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಸುಲೋಚನಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚಂದ್ರಕಲಾ, ಎಸ್.ಡಿ.ಎಂ.ಸಿ. ಸದಸ್ಯೆ ಜ್ಯೋತಿ, ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಮತ್ತು ಶಿಬಿರದ ನಾಯಕ ರಂಜಿತ್ ಕೆ.ಯು., ಕಾರ್ಯದರ್ಶಿ ಉಷಾರಾಣಿ ಕೆ.ಬಿ. ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಕೆ.ಪಿ.ಎಸ್. ಪ್ರೌಢ ಮತ್ತು ಪ್ರಾಥಮಿಕ ವಿಭಾಗ, ಶ್ರೀ ರಾಮ ಟ್ರಸ್ಟ್ ಶಾಲೆ, ಅಂಕುರ್ ಶಾಲೆ, ಎಕ್ಸೆಲ್ ಶಾಲೆಯ ೧೨೫ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಬಿರವು ಧ್ವಜಾರೋಹಣ ದೊಂದಿಗೆ ಪ್ರಾರಂಭಗೊAಡು, ನಾಪೋಕ್ಲುವಿನ ಮುಖ್ಯ ರಸ್ತೆಯಲ್ಲಿ ಸಾಗಿದ ಪಥಸಂಚಲನವನ್ನು ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್. ಉದ್ಘಾಟಿಸಿ ಚಾಲನೆ ನೀಡಿದರು.

ಶಿಬಿರಾಗ್ನಿ

ಶನಿವಾರ ರಾತ್ರಿ ನಡೆದ ಭವ್ಯ ಶಿಬಿರಾಗ್ನಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮರುದಿನ ಭಾನುವಾರ ಬೆಳಿಗ್ಗೆ ಬಿ.ಪಿ. ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಅದಾದ ನಂತರ ಮಕ್ಕಳಿಂದಲೇ ಅಡುಗೆ ತಯಾರಿಸುವ ಕಾರ್ಯಕ್ರಮ ನಡೆಸಲಾಯಿತು. ನಂತರ ಮಕ್ಕಳು ಮನೋರಂಜನ ಆಟಗಳು ಮತ್ತು ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ನಾಯಕರಿಂದ ಧ್ವಜದ ನಿಯಮ, ಸಮವಸ್ತç, ಬ್ಯಾಡ್ಜ್ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಡಿ.ಸಿ. ಸ್ಕೌಟ್ ಮತ್ತು ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಹಾರಿಸ್ ಕೆ.ಎ. ವಹಿಸಿದ್ದರು.