*ಗೋಣಿಕೊಪ್ಪಲು, ಡಿ. ೧೫: ಪೊನ್ನಂಪೇಟೆಯ ಪದವಿಪೂರ್ವ ಕಾಲೇಜು ಕೆಪಿಎಸ್ ಪ್ರೌಢಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಪೊನ್ನಂಪೇಟೆ ಇವುಗಳ ಆಶ್ರಯದಲ್ಲಿ ದಿ. ಸೀತಾಬಾಯಿ ಮತ್ತು ರಾಮಚಂದ್ರ ಕಾಮತ್ ದತ್ತಿನಿಧಿ ಕಾರ್ಯಕ್ರಮ ನಡೆಯಿತು. "ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ" ವಿಚಾರವಾಗಿ ಕೆಪಿಎಸ್ ಶಾಲೆಯ ಶಿಕ್ಷಕಿ ನಳಿನಿ ಉಪನ್ಯಾಸ ನೀಡಿದರು.
ಹೆಣ್ಣು ಮಕ್ಕಳು ಶಿಕ್ಷಣವಂತರಾದರೆ ಮುಂದಿನ ಭಾರತದ ಭವಿಷ್ಯ ಸುಭಿಕ್ಷವಾಗಿರುತ್ತದೆ. ಹೆಣ್ಣು ಹೆಚ್ಚು ಕಲಿತಂತೆ ಶಿಸ್ತುಬದ್ಧ ಜೀವನ ಮತ್ತು ಕೌಟುಂಬಿಕ ಬದುಕಿನಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಾಗಬಲ್ಲದು. ಯಾವ ನೆಲದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯಗಳು ನಡೆಯುವುದಿಲ್ಲವೋ ಆ ಭೂಮಿ ಅಭಿವೃದ್ಧಿ ಕಾಣುತ್ತದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಪೊನ್ನಂಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್, ಶಿಕ್ಷಣದ ಮೌಲ್ಯವನ್ನು ತಿಳಿದುಕೊಂಡಾಗ ಬದುಕು ಹಸನಾಗುತ್ತದೆ. ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮತ್ತು ಮನುಷ್ಯ ಜೀವನವನ್ನು ಸುಂದರ ಕಾಣಿಸಲು ಶಿಕ್ಷಣದ ಪ್ರಾಮುಖ್ಯತೆ ಹೆಚ್ಚಿದೆ ಎಂದರು.
ಪೊನ್ನAಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ಮಾತನಾಡಿ, ಮಾತೃಭಾಷೆ ಯಾವುದೇ ಆಗಿದ್ದರೂ ಸಮಾಜದಲ್ಲಿ ಚಂದ ಕಾಣುವ ಕನ್ನಡವನ್ನು ಹೆಚ್ಚು ಮಾತನಾಡುವ ಮೂಲಕ ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಕಾರಣರಾಗಬೇಕು ಎಂದರು.
ಪೊನ್ನAಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರಾಸ್ತಾವಿಕ ನುಡಿಯಾಡಿದರು.
ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಚಂದನ್ ಕಾಮತ್ ಮಾತನಾಡಿದರು.
ದತ್ತಿ ದಾನಿಗಳಾದ ಬೆಂಗಳೂರಿನ ಆರ್. ನಾಗೇಂದ್ರ ಕಾಮತ್, ಆರ್. ರಾಜಾರಾವ್, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಟಿ.ಬಿ ಜೀವನ್, ಟಿ.ಕೆ ವಾಮನ, ಚಂದನ ಡಿ. ಮಂಜುನಾಥ್ ಇವರುಗಳ ಸಮ್ಮುಖದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶನಿವಾರಸಂತೆಯ ಶ್ರೀ ವಿಘ್ನೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಕ್ಷತಾ ಪರವಾಗಿ ಆಕೆಯ ತಂದೆ ಲೋಕೇಶ್ ಅವರನ್ನು ಗೌರವಿಸಲಾಯಿತು.