(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಡಿ. ೧೪: ಕೊಡಗಿನ ಪ್ರವಾಸಿ ತಾಣಕ್ಕೆ ಮತ್ತೊಂದು ಗರಿ ಮೂಡಲು ದ.ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರವು ಸಜ್ಜಾಗುತ್ತಿದೆ. ಕೊಡಗು-ಮೈಸೂರು ಮುಖ್ಯರಸ್ತೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ, ಗಡಿಭಾಗ ಆನೆಚೌಕೂರುವಿನ ಸಮೀಪವಿರುವ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಆನೆಗಳನ್ನು ಅತ್ಯಂತ ಸಮೀಪದಿಂದ ವೀಕ್ಷಣೆ ಮಾಡುವ ಮೂಲಕ ಶಿಬಿರವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅರಣ್ಯ ಇಲಾಖೆಯು ಕಾರ್ಯೋನ್ಮುಖವಾಗಿದೆ. ಈಗಾಗಲೇ ಈ ಯೋಜನೆಗೆ ಸರ್ಕಾರದಿಂದ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.

ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ದ.ಕೊಡಗಿನ ಮತ್ತಿಗೋಡುವಿನಲ್ಲಿ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಮುಕ್ತ ಅವಕಾಶ ಒದಗಿಸಲು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರಿಂದ ಸಾಕಾನೆ ಶಿಬಿರವು ಅಭಿವೃದ್ಧಿಯಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಾನೆ ಶಿಬಿರವು ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿಯನ್ನು ಕಂಡಿರಲಿಲ್ಲ. ಈ ಹಿಂದೆ ಅರಣ್ಯ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳು ಶಿಬಿರಕ್ಕೆ ಆಗಮಿಸಿದ ಸಂದರ್ಭ ಇಲ್ಲಿಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು.

ಮೈಸೂರು, ತಿತಿಮತಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರ ಇದ್ದು, ಈ ಹಿಂದೆ ಪ್ರವಾಸಿಗರು ರಸ್ತೆ ಬದಿಯಲ್ಲಿ ನಿಂತು ಸಾಕಾನೆಗಳನ್ನು ವೀಕ್ಷಣೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಪ್ರವಾಸಿತಾಣವಾಗಿ ಮಾಡುವ ನಿರ್ಧಾರಕ್ಕೆ ಅರಣ್ಯ ಇಲಾಖೆ ಯೋಜನೆ ರೂಪಿಸಿತ್ತು. ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಸಾಕಾನೆಗಳ ವೀಕ್ಷಣೆಗೆ ಅವಕಾಶ ಲಭ್ಯವಾಗುವುದರಿಂದ ಮತ್ತಿಗೋಡು ಸಾಕಾನೆ ಶಿಬಿರವು ಮುಂದೊAದು ದಿನ ಉತ್ತಮ ಪ್ರವಾಸಿತಾಣವಾಗಿ

(ಮೊದಲ ಪುಟದಿಂದ) ಮಾರ್ಪಾಡಾಗುವುದಾಗಿ ಅಂದಾಜಿಸಲಾಗಿದೆ. ಪ್ರವಾಸಿಗರಿಂದ ಶುಲ್ಕ ವಸೂಲಾತಿ ಮಾಡುವುದರಿಂದ ಇಲಾಖೆಯ ನಿರ್ವಹಣೆಗೆ ಹಾಗೂ ಸಾಕಾನೆಗಳ ಅಭಿವೃದ್ಧಿಗೆ ಪೂರಕವಾದ ಹಣವು ಲಭ್ಯವಾಗಲಿದೆ.

ನಾಗರಹೊಳೆ ವನ್ಯಜೀವಿ ವಲಯಕ್ಕೆ ಒಳಪಟ್ಟಿರುವ ಆನೆಚೌಕೂರು ಗಡಿಯಿಂದ ತಿತಿಮತಿ-ಗೋಣಿಕೊಪ್ಪ ಮುಖ್ಯರಸ್ತೆಯ ನಡುವೆ ಮತ್ತಿಗೋಡು ಸಾಕಾನೆ ಶಿಬಿರವು ಜನಾಕರ್ಷಣೆಯನ್ನು ಪಡೆಯಲಿದೆ. ವಿವಿಧ ಭಾಗಗಳ ಕಾಡಾನೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ ವೇಳೆ ಮತ್ತಿಗೋಡು ಸಾಕಾನೆ ಶಿಬಿರದಲ್ಲಿರುವ ಅಭಿಮನ್ಯು ಸೇರಿದಂತೆ ಅನೇಕ ಸಾಕಾನೆಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತವೆ. ಇಂತಹ ಆನೆಗಳನ್ನು ಅತ್ಯಂತ ಸಮೀಪದಿಂದ ನೋಡುವುದೇ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಪ್ರಮುಖವಾಗಿ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪ್ರವಾಸಿಗರನ್ನು ಕೇಂದ್ರವಾಗಿಟ್ಟುಕೊAಡು ಅಭಿವೃದ್ಧಿಪಡಿಸಲಾಗುತ್ತಿದೆ.

ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕರಾದ ಹರ್ಷಕುಮಾರ್ ಹಾಗೂ ಹುಣಸೂರು ವಲಯದ ದಯಾನಂದ್ ಹಾಗೂ ಇತರ ಅಧಿಕಾರಿಗಳು ಈ ಬಗ್ಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ನೀಲಿನಕ್ಷೆ ತಯಾರಿಸಿ ತಗುಲುವ ವೆಚ್ಚದ ಬಗ್ಗೆ ಸಮಗ್ರ ವರದಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹಿರಿಯ ಅಧಿಕಾರಿಗಳು ಇಲಾಖೆ ವತಿಯಿಂದ ರೂ. ೧ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದರು.