*ಗೋಣಿಕೊಪ್ಪ, ಡಿ. ೧೩: ಗೋಣಿಕೊಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ದಂತ ವೈದ್ಯಕೀಯ ತಪಾಸಣೆ ಶಿಬಿರವನ್ನು ಆಯೋಜಿಸಿತ್ತು.

ಗಿಡಕ್ಕೆ ನೀರೆರೆಯುವ ಮೂಲಕ ದಂತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಅತಿಥಿಗಳು ಚಾಲನೆ ನೀಡಿದರು. ವೀರಾಜಪೇಟೆಯ ದಂತ ವೈದ್ಯ ಕಾಲೇಜಿನ ಡಾ. ಕೀರ್ತಿ, ಮಕ್ಕಳಿಗೆ ಹಲ್ಲನ್ನು ಸ್ವಚ್ಛಗೊಳಿಸುವುದು ಹೇಗೆ? ಎಂಬುದರ ವಿವರಣೆಯನ್ನು ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಮಾತನಾಡಿ, ಈ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯುತ್ತಿರುವುದರಿಂದ ಮಕ್ಕಳಲ್ಲಿ ಹಲ್ಲುಗಳ ಬಗ್ಗೆ ಜಾಗೃತಿ ಮೂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಬಾಲು, ಸದಸ್ಯ ಬಿ.ಎನ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ಡಾ. ಶರತ್‌ಕುಮಾರ್, ಖಜಾಂಚಿ ಆಂಟೋನಿ, ಬಾಲಕೃಷ್ಣ, ಕಾಂತರಾಜು, ಸಚಿನ್, ದಂತ ವೈದ್ಯ ಆಶಿಕ್ ಚಂಗಪ್ಪ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಕೆ.ಆರ್. ಶಾಂತಿ, ಶಿಕ್ಷಕಿ ಎಂ.ಸಿ. ಇಂದಿರಾ, ವೀರಾಜಪೇಟೆಯ ದಂತ ವೈದ್ಯ ಕಾಲೇಜಿನ ವೈದ್ಯರುಗಳು, ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.