ಮಡಿಕೇರಿ, ಡಿ. ೧೩: ಮೈಸೂರು ದಸರಾ ಆನೆ ಅರ್ಜುನನ ದುರಂತ ಸಾವಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಗೆ ಅಭಿಮನ್ಯು ಆನೆಯನ್ನು ಬಳಸದೇ ಇರುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಕೊಡಗು ಜಿಲ್ಲೆಯ ಮತ್ತಿಗೋಡು ಸಾಕಾನೆ ಸಂಶೋಧನಾ ಕೇಂದ್ರದಲ್ಲಿರುವ ಅಭಿಮನ್ಯು ಆನೆ, ಅರ್ಜುನ ಆನೆಯಂತೆಯೇ ಅರಣ್ಯ ಇಲಾಖೆಯಲ್ಲಿ ಬಹುಬೇಡಿಕೆಯುಳ್ಳ ಸಾಕಾನೆಯಾಗಿದ್ದು, ದೇಶದ ವಿವಿಧೆಡೆ ಕಾಡಾನೆ ಸೆರೆಯ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದ. ‘ಒಮ್ಮೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಇರಿಸುವ ಪ್ರಶ್ನೆಯೇ ಇಲ್ಲ’ ಎಂಬAತೆ ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಅಭಿಮನ್ಯು ಈವರೆಗೆ ೧೪೫ ರಷ್ಟು ಕಾಡಾನೆಗಳನ್ನು ಸೆರೆಹಿಡಿದು ಸಾಕಾನೆ ಶಿಬಿರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾನೆ. ಅರಣ್ಯ ಇಲಾಖೆಯ ಪಾಲಿಗೆ ಕೊಡಗಿನ ಈ ಹೆಮ್ಮೆಯ ಅಭಿಮನ್ಯು ನಂಬಿಕಸ್ಥ ಆನೆಯಂತಿದ್ದು ಯಾವುದೇ ಸವಾಲಿನ ಕಾರ್ಯಾಚರಣೆ ನೀಡಿದರೂ ಅದನ್ನು ಗೆದ್ದುಕೊಂಡು ಬರಬಲ್ಲ ಸಾಮರ್ಥ್ಯ ಅಭಿಮನ್ಯುವಿಗಿದೆ ಎಂದು ಈವರೆಗೂ ನಿರೂಪಿತವಾಗಿದೆ. ಹೀಗಾಗಿಯೇ ಕರ್ನಾಟಕದ ವಿವಿಧೆಡೆ ಮಾತ್ರವಲ್ಲ ಗೋವಾ, ಛತ್ತೀಸ್‌ಗಡ್, ಮಧ್ಯಪ್ರದೇಶ, ಒರಿಸ್ಸಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಗೂ ಅಭಿಮನ್ಯು ಮತ್ತು ಅರ್ಜುನನ್ನು ಕರೆಸಿಕೊಂಡು ಅಭಿಮನ್ಯು ನೇತೃತ್ವದಲ್ಲಿ ಹಲವಾರು ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ. ಕೇವಲ ಕಾಡಾನೆ ಮಾತ್ರವಲ್ಲ, ಧಾಳಿನಿರತ ಹುಲಿಗಳ ಕಾರ್ಯಾಚರಣೆಯಲ್ಲಿಯೂ ಕೊಡಗಿನ ಈ ಧೀರ ಅಭಿಮನ್ಯು ಪಾಲ್ಗೊಂಡು ಈವರೆಗೂ ೩೦ ವ್ಯಾಘ್ರಗಳ ಸೆರೆಗೆ ಕಾರಣನಾಗಿದ್ದಾನೆ. ಹೀಗಾಗಿಯೇ ಅಭಿಮನ್ಯುವಿಗೆ ಎಕೆ ೪೭ ಮತ್ತು ಕೂಂಬಿAಗ್ ಎಕ್ಸ್ಪರ್ಟ್ ಎಂಬ ಹೆಗ್ಗಳಿಕೆಯ ಬಿರುದು ಕೂಡ ಲಭಿಸಿದೆ.

೧೯೭೭ರಲ್ಲಿ ಕೊಡಗಿನ ಹೆಬ್ಬಳ್ಳ ಕಾಡಿನಲ್ಲಿ ಸೆರೆಯಾಗಿದ್ದ ಅಭಿಮನ್ಯು ಸೆರೆ ಸಿಕ್ಕಲ್ಲಿಂದ ಅರಣ್ಯ ಇಲಾಖೆಯ ಪಾಲಿಗೆ ವಿದೇಯ ಮತ್ತು ಧೈರ್ಯವಂತ ಎಂಬ ನಂಬಿಕೆ ಉಳಿಸಿಕೊಂಡು ಬಂದಿದ್ದು ಮತ್ತಿಗೋಡು ಶಿಬಿರದಲ್ಲಿ ೫ ಸಾವಿರ ಕೆ.ಜಿ. ತೂಕದ ಅಭಿಮನ್ಯುವಿಗೆ ವಸಂತ ಎಂಬ ಮಾವುತ, ಜೆ.ಕೆ. ರಾಜು ಎಂಬ ಕಾವಾಡಿಯ ಆತ್ಮೀಯತೆ ದೊರಕಿದೆ.

೬೪ ವರ್ಷ ಪ್ರಾಯವಾಗಿದ್ದ ಅರ್ಜುನ ಆನೆಯು ಇತ್ತೀಚೆಗೆ ಕೊಡಗಿನ ಗಡಿಯಾದ ಎಸಳೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿಯುವ ಸಂದರ್ಭ ಮದಬಂದಿದ್ದ ಕಾಡಾನೆಯ ಧಾಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ. ಅರ್ಜುನ ವೀರಾವೇಶದ ಸಾವು ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿತ್ತು. ರಾಜ್ಯ ಸರ್ಕಾರವೂ ಅರ್ಜುನನ ಸಾವನ್ನು ಗಂಭೀರವಾಗಿ ಪರಿಗಣಿಸಿತ್ತಲ್ಲದೇ, ಅರ್ಜುನನ ಸ್ಮಾರಕವನ್ನು ಆತ ವಾಸವಾಗಿದ್ದ ಬಳ್ಳೆ ಕ್ಯಾಂಪ್‌ನಲ್ಲಿ ನಿರ್ಮಿಸುವುದಾಗಿಯೂ ಹೇಳಿಕೆ ನೀಡಿತ್ತು.

ಪ್ರಸ್ತುತ, ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿ ತಾಯಿಯ ಚಿನ್ನದ ಅಂಬಾರಿ ಹೊರುವ ಮೂಲಕ ಪಟ್ಟದಾನೆಯಾಗಿದ್ದಾನೆ. ಅರ್ಜುನನ ಬಳಿಕ ೪ ವರ್ಷಗಳ ಹಿಂದೆ ಅಭಿಮನ್ಯುವಿಗೆ ಪಟ್ಟದಾನೆ ಎಂಬ ಪಟ್ಟ ದೊರಕಿತ್ತು.

ಅಭಿಮನ್ಯು ಈಗ ೫೭ ವರ್ಷಗಳನ್ನು ತಲುಪಿದ್ದಾನೆ. ಅರಣ್ಯ ಇಲಾಖೆ ನಿಯಮ ಪ್ರಕಾರ ಅಭಿಮನ್ಯು ಸೇವೆಯಿಂದ ನಿವೃತ್ತಿಯಾಗಲು ಇನ್ನೂ ೩ ವರ್ಷಗಳಿವೆ.

ಈಗಲೂ ಅಭಿಮನ್ಯು ಸಾಕಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸಕ್ರಿಯನಾಗಿದ್ದಾನೆ.

ಆದರೆ, ಮುಂಜಾಗ್ರತಾ ಕ್ರಮವಾಗಿ ಅಭಿಮನ್ಯುವನ್ನು ಮುಂದಿನ ದಿನಗಳಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಿಂದ ದೂರವೇ ಇಡಲು ಅರಣ್ಯ ಇಲಾಖೆ ಚಿಂತಿಸುತ್ತಿದೆ ಎಂದು ‘ಶಕ್ತಿ’ಗೆ ಮೂಲಗಳಿಂದ ತಿಳಿದುಬಂದಿದೆ.

ಕಾರಣ ಏನು?

- ಅಭಿಮನ್ಯುವಿಗೆ ೫೭ ವರ್ಷಗಳಾಗಿದೆ. ವಯಸ್ಸು ಜಾರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಸತತವಾಗಿ ಅಭಿಮನ್ಯು ಆನೆಯನ್ನು ಬಳಸಿಕೊಳ್ಳುವುದು ಅಷ್ಟೇನೂ ಸಮಂಜಸವಲ್ಲ, ಜತೆಗೆ ಯಾವಾಗ ಬೇಕಾದರೂ ಇದು ರಿಸ್ಕ್ ಎನಿಸಬಹುದು.

- ಪ್ರಸ್ತುತ, ಮೈಸೂರು ದಸರಾಕ್ಕೆ ಪಟ್ಟದಾನೆಯಾಗಿ ಉಳಿದಿರುವುದು ಅಭಿಮನ್ಯು ಮಾತ್ರ. ಇವನನ್ನು ಬಿಟ್ಟರೆ ಬೇರೊಂದು ಸಾಕಾನೆ ಇನ್ನೂ ಪಟ್ಟದಾನೆ ಪಟ್ಟಕ್ಕೆ ತರಬೇತಿಯಾಗಿಲ್ಲ.

- ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಅಕಸ್ಮಾತ್ ಅಭಿಮನ್ಯುವಿಗೆ ಏನಾದರೂ ಹೆಚ್ಚುಕಮ್ಮಿಯಾದರೂ ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಬಹಳ ದೊಡ್ಡ ಮುಜುಗರವಾಗಲಿದೆ.

- ಪಟ್ಟದಾನೆಯನ್ನು ಹುಡುಕುವುದು ಮತ್ತು ದಸರಾ ಜಂಬೂಸವಾರಿಗೆ ತರಬೇತಿಗೊಳಿಸುವುದು ಸುಲಭ ಸಾಧ್ಯವೇನಲ್ಲ. ಸಾಕಷ್ಟು ತಿಂಗಳ ತರಬೇತಿ ಇಂತಹ ಆನೆಗೆ ಬೇಕಾಗಿದೆ.

- ಈಗಾಗಲೇ ಅರಣ್ಯ ಇಲಾಖೆಯು ತನ್ನಲ್ಲಿನ ಸದೃಢ ಸಾಕಾನೆಗಳನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅಭಿಮನ್ಯುವೇ ರಾಜ್ಯ ಸಾಕಾನೆಗಳ ಪೈಕಿ ಕ್ಯಾಪ್ಟನ್ ಅಥವಾ ರಾಜನಂತಿದ್ದಾನೆ.

- ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರಲು ಅಭಿಮನ್ಯುವಿನಂತೆ ಸಾಮರ್ಥ್ಯ, ಧೈರ್ಯವಿರುವ ಮತ್ತೊಂದು ಸಾಕಾನೆ ಇನ್ನೂ ಲಭಿಸಿಲ್ಲ.

- ಕಳೆದ ೪೨ ವಷಗಳ ಅವಧಿಯಲ್ಲಿ ದ್ರೋಣ, ಬಲರಾಮ, ಅರ್ಜುನ ಮತ್ತು ಅಭಿಮನ್ಯು ಮಾತ್ರ ಮೈಸೂರು ದಸರಾದ ಪಟ್ಟದಾನೆಗಳಾಗಿವೆ. ಅಂದರೆ ನಾಲ್ಕು ದಶಕಗಳ ಅವಧಿಯಲ್ಲಿ ಕೇವಲ ನಾಲ್ಕು ಸಾಕಾನೆಗಳು ಮಾತ್ರ ಅಂಬಾರಿ ಹೊರಲು ಆಯ್ಕೆಯಾಗಿದೆ. ಈ ಪೈಕಿ ಮೂರು ಆನೆಗಳು ಈಗಾಗಲೇ ಸಾವನ್ನಪ್ಪಿದ್ದು, ಅಭಿಮನ್ಯು ಮಾತ್ರ ಈಗ ಉಳಿದುಕೊಂಡಿರುವ ಸಾಕಾನೆಯಾಗಿದೆ.

- ಸದ್ಯದ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ ಪಾಲಿಗೆ ಏಕಮಾತ್ರ ಆಶಾಕಿರಣದಂತಿರುವ ಅಭಿಮನ್ಯು ಆನೆಯ ಹಿತರಕ್ಷಣೆ ಎಲ್ಲಾ ರೀತಿಯಲ್ಲಿಯೂ ಅಗತ್ಯವಾಗಿದೆ.

ಯಾವುದೇ ರೀತಿಯಲ್ಲಿಯೂ ಅಭಿಮನ್ಯು ಆನೆಗೆ ಕಿಂಚಿತ್ತೂ ಸಮಸ್ಯೆಯಾಗದಂತೆ ಎಚ್ಚರಿಕೆಯಿಂದ ಈ ಆನೆಯನ್ನು ನೋಡಿಕೊಳ್ಳಬೇಕಾದ ಹೊಣೆ ಅರಣ್ಯ ಇಲಾಖೆಯದ್ದಾಗಿದೆ.

- ಮೈಸೂರು ದಸರಾದಲ್ಲಿ ೨೫ ವರ್ಷಗಳಿಂದಲೂ ಅಭಿಮನ್ಯು ಪಾಲ್ಗೊಳ್ಳುತ್ತಿರುವ ಹಿರಿಮೆ ಹೊಂದಿದ್ದಾನೆ.

ಹೀಗಿರುವಾಗ ಕೊಂಚ ಹೆಚ್ಚುಕಮ್ಮಿಯಾದರೂ ಅರಣ್ಯ ಇಲಾಖೆ ಭಾರೀ ಬೆಲೆ ತೆರಬೇಕಾಗುತ್ತದೆ.

ಹೀಗಾಗಿಯೇ ಅಭಿಮನ್ಯುವನ್ನು ಸಾಹಸಮಯ ಕಾರ್ಯಾಚರಣೆಗಳಾದ ಕಾಡಾನೆ ಸೆರೆ ಕಾರ್ಯ, ಮರದ ದಿಮ್ಮಿಗಳನ್ನು ಎಳೆಯುವ ಕೆಲಸಗಳಿಂದ ದೂರ ಇಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

- ಅನಿಲ್ ಎಚ್.ಟಿ., ಮಡಿಕೇರಿ