ಸೋಮವಾರಪೇಟೆ, ಡಿ. ೧೩: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಮಕ್ಕಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಾವು ಪ್ರತಿಷ್ಠಾನದ ವತಿಯಿಂದ ಗೌಡಳ್ಳಿ ಪ್ರೌಢಶಾಲೆ ಸಭಾಂಗಣದಲ್ಲಿ ಮಕ್ಕಳ ಗ್ರಾಮಸಭೆ ನಡೆಯಿತು.
ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕ ಮಕ್ಕಳು ತಮ್ಮ ಗ್ರಾಮದ ಶಾಲೆಗಳ ದುಸ್ಥಿತಿ, ಗ್ರಾಮದ ರಸ್ತೆ ಸಮಸ್ಯೆ, ಮೂಲಭೂತ ಸೌಕರ್ಯಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದರು.
ಶುಂಠಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿಯ ಮೇಲ್ಚಾವಣಿಯ ಮರಗಳು ಗೆದ್ದಲು ಹಿಡಿದಿದ್ದು, ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂದು ೫ನೇ ತರಗತಿಯ ಶ್ರೀನಿಧಿ ಹೇಳಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಆದರೆ, ದುರಸ್ತಿ ಕೆಲಸ ಮಾಡಿಸಿಲ್ಲ. ಮಕ್ಕಳ ಜೀವಹಾನಿಯಾದರೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು.
ಶಾಲೆಯ ಆವರಣದಲ್ಲಿ ಪಂಚಾಯಿತಿ ವತಿಯಿಂದ ಇಂಗು ಗುಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ನೀರಿನ ಹರಿವಿಗೆ ಪೈಪ್ ಅಳವಡಿಸಿಲ್ಲ. ಶಾಲಾ ಆವರಣ ಗಬ್ಬು ವಾಸನೆಯಿಂದ ಕೂಡಿದೆ. ಗ್ರಾಮೀಣ ಭಾಗದಿಂದ ಮಕ್ಕಳು ಕಾಲ್ನಡಿಗೆಯಲ್ಲೇ ಬರಬೇಕು. ಮಳೆಗಾಲದಲ್ಲಿ ಛತ್ರಿ ಮತ್ತು ಸ್ವೆಟರ್ ನೀಡಬೇಕು ಎಂದು ಮನವಿ ಮಾಡಿದರು.
ನಂದಿಗುAದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೈತೊಳೆಯುವ ತೊಟ್ಟಿ ನಿರ್ಮಿಸಿಕೊಡಬೇಕು. ಶಾಲೆಯ ಮೆಟ್ಟಿಲಿನವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಬೇಕು. ಆಟದ ಮೈದಾನ ಸ್ವಚ್ಛಗೊಳಿಸಬೇಕೆಂದು ವಿದ್ಯಾರ್ಥಿಗಳು ಗಮನ ಸೆಳೆದರು.
ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಕಾಡು ಬೆಳೆದಿದ್ದು, ಹಾವುಗಳು ಕೊಠಡಿ ಯೊಳಗೆ ಬರುತ್ತವೆ. ಕಾಡು ಕಡಿಸಿಕೊಡಿ ಎಂದು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು. ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಕೊಠಡಿಯ ಬೀಗ ಒಡೆದು ಕಪ್ಪು ಹಲಗೆಯಲ್ಲಿ ಅಶ್ಲೀಲ ಪದಗಳನ್ನು ಬರೆಯುತ್ತಾರೆ. ಕೊಠಡಿಯೊಳಗೆ ಮೂತ್ರ ಮಾಡಿ ಹೋಗುತ್ತಾರೆ. ನಮ್ಮ ಶಾಲೆಗೆ ರಕ್ಷಣೆ ಬೇಕು ಎಂದು ವಿದ್ಯಾರ್ಥಿಗಳು ಸಭೆಯಲ್ಲಿ ಒತ್ತಾಯಿಸಿದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದು, ಹೆಚ್ಚುವರಿ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿ ಕೊಡ ಬೇಕೆಂದು ಗೌಡಳ್ಳಿ ಪ್ರೌಢಶಾಲೆಯ ಕೌಶಿಕ್ ಹೇಳಿದರು.
ಶನಿವಾರಸಂತೆ-ಗೌಡಳ್ಳಿ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಡು ಬೆಳೆದಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ಕಾಡು ಕಡಿಸಬೇಕು ಎಂದು ಗೌಡಳ್ಳಿ ಶಾಲೆಯ ವಿದ್ಯಾರ್ಥಿ ಲೋಕೇಶ್ ಮನವಿ ಮಾಡಿದರು.
ಪಿಡಿಓ ಲಿಖಿತ ಮಾತನಾಡಿ, ಕಳೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಅನೇಕ ಬೇಡಿಕೆ ಗಳನ್ನು ಇಟ್ಟಿದ್ದರು. ಗೌಡಳ್ಳಿ ಸರ್ಕಾರಿ ಶಾಲೆಗೆ ರಸ್ತೆ, ಶೌಚಗೃಹ, ಕಾಂಪೌAಡ್ ಮಾಡಲಾಗಿದೆ. ನಂದಿಗುAದ ಹಾಗೂ ಶುಂಠಿ ಶಾಲೆಗೂ ಕಾಂಪೌAಡ್ ಮಾಡಲಾಗಿದೆ. ಉದ್ಯಾನವನವನ್ನು ಮಾಡಿಕೊಡಲಾಗುವುದು. ಕಟ್ಟದ ದುರಸ್ತಿಯ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿದೆ ಎಂದರು.
ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ದೇಶದಲ್ಲಿ ೫೧ ಕೋಟಿ ಮಕ್ಕಳಿದ್ದಾರೆ. ಅದರಲ್ಲಿ ಶೇ. ೩೮ ರಷ್ಟು ಗ್ರಾಮೀಣ ಭಾಗದಲ್ಲಿ ಮಕ್ಕಳಿದ್ದಾರೆ. ಬದುಕುವ ಹಕ್ಕು, ರಕ್ಷಣೆ ಹೊಂದುವ ಹಕ್ಕು, ಭಾಗವಹಿಸುವ ಹಕ್ಕುಗಳನ್ನು ಸಂವಿಧಾನ ನೀಡಿದ್ದು, ಎಲ್ಲಾ ಹಕ್ಕುಗಳು ಸಿಗುವಂತಾಗಬೇಕು. ಮಕ್ಕಳು ಯಾವುದೇ ಮುಲಾಜಿಲ್ಲದೆ ಕೇಳಿ ಪಡೆದುಕೊಳ್ಳಬೇಕು.
ನಿಮ್ಮ ಸಮಸ್ಯೆಗಳನ್ನು ಸಹಾಯವಾಣಿಗೆ ಕರೆ ಮಾಡಿ ಹೇಳಿಕೊಳ್ಳಬಹುದು ಎಂದು ಹೇಳಿದರು. ಸಭೆಯಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ, ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾರ ರೋಹಿಣಿ, ಸುಮಾ, ಮಲ್ಲಿಕಾ, ಮಂಜುನಾಥ್, ವೆಂಕಟೇಶ್, ನಾಗರಾಜು, ಗಣೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಜಿ.ಆರ್. ತುಳಸಿ, ಮಕ್ಕಳ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್, ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು, ವಿದ್ಯಾರ್ಥಿಗಳಾದ ಸ್ಪೂರ್ತಿ, ಗಾನವಿ, ಜಯಶ್ರೀ ಇದ್ದರು.