ಶನಿವಾರಸಂತೆ, ಡಿ. ೧೨: ವಿಜ್ಞಾನ ಮನುಷ್ಯ ಜೀವನದಲ್ಲಿ ವರವೂ ಹೌದು; ಶಾಪವೂ ಹೌದು. ಹಾಗಾಗಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಬೇಕು ಎಂದು ಕಾಜೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗಿರೀಶ್ ಹೇಳಿದರು.
ಸಮೀಪದ ಬೆಸೂರು ಗ್ರಾಮದ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರಿ ಪ್ರೌಢಶಾಲೆ ಸಹಭಾಗಿತ್ವದಲ್ಲಿ ನಡೆದ ಕ್ಲಸ್ಟರ್ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ನುಡಿಯಾಡಿದರು.
ವಿಜ್ಞಾನ ಜೀವನದಲ್ಲಿ ಅಮೂಲ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ೨ ಅಂಶಗಳಿದ್ದು ವಿದ್ಯಾರ್ಥಿಗಳು ಜೀವನದಲ್ಲಿ ಭಯಪಡಬಾರದು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಭಯಪಡಿಸಬಾರದು. ಅವರು ಮುಕ್ತವಾಗಿ ಪ್ರಶ್ನೆ ಕೇಳಲು ಶಿಕ್ಷಕರು ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿ, ತನ್ನಷ್ಟಕ್ಕೆ ತಾನೇ ವೈಜ್ಞಾನಿಕ ಮನೋಭಾವ ಮೂಡುತ್ತದೆ ಎಂದರು.
ಕ್ಲಸ್ಟರ್ ವಲಯದ ವಿವಿಧ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳ ಉತ್ತಮ ಪ್ರದರ್ಶನ ನೀಡಿದರು. ಕಿರಿಯರ ವಿಭಾಗದಲ್ಲಿ ಚಿಕ್ಕಭಂಡಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯರ ವಿಭಾಗದಲ್ಲಿ ನ್ಯಾಯದಹಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಬಹುಮಾನ ಪಡೆಯಿತು.
ತೀರ್ಪುಗಾರರಾಗಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಧು ಹಾಗೂ ಕಾಜೂರು ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಗಿರೀಶ್ ಆಗಮಿಸಿದ್ದರು,
ಸೋಮವಾರಪೇಟೆ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕವಿತಾ, ಕೊಡ್ಲಿಪೇಟೆ ವಲಯ ಸಂಪನ್ಮೂಲ ವ್ಯಕ್ತಿಗಳಾದ ರವೀಶ್, ಜಾನ್ ಪಾಲ್, ಬೆಸೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಶಿಕಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಜೆ.ಡಿ. ಸುರೇಶ್, ವಿವಿಧ ಶಾಲಾ ಶಿಕ್ಷಕರು, ಪೋಷಕರು ಹಾಜರಿದ್ದರು.