ಮಡಿಕೇರಿ, ಡಿ. ೧೧: ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಕಡಿತ ಗೊಳಿಸಿರುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮೊದಲಿದ್ದ ರೀತಿಯಲ್ಲಿಯೇ ೨೯ ಕ್ಷೇತ್ರಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ಎ.ಎಸ್. ಪೊನ್ನಣ್ಣ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ತಿದ್ದುಪಡಿ ಮಾಡಿದ ಪರಿಣಾಮ ೨೯ ಕ್ಷೇತ್ರಗಳಿಂದ ೨೩ ಕ್ಷೇತ್ರಕ್ಕೆ ಕಡಿತಗೊಂಡಿದೆ. ಭೌಗೋಳಿಕವಾಗಿ ವಿಶಾಲವಾಗಿರುವ ಜಿಲ್ಲೆಗೆ ಮೊದಲಿನಂತೆ ೨೯ ಕ್ಷೇತ್ರಗಳನ್ನು ನೀಡಬೇಕು. ೧೮ ಸಾವಿರ ಜನಸಂಖ್ಯೆ ಬದಲು ೧೭ ಸಾವಿರ ಜನಸಂಖ್ಯೆಗೆ ಇಳಿಸಿ ಮೊದಲಿದ್ದ ರೀತಿಯಲ್ಲಿ ಕ್ಷೇತ್ರವನ್ನು ನೀಡಬೇಕು ಎಂದರು. ಶಾಸಕ ಡಾ. ಮಂಥರ್ ಮಾತನಾಡಿ, ೧೭ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಸದಸ್ಯರನ್ನು ನೀಡಿದರೆ ಉತ್ತಮವಾಗುತ್ತದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುತ್ತದೆ. ಜಿಲ್ಲೆಯ ೨ ಕ್ಷೇತ್ರ ವಿಶಾಲವಾಗಿರುವ ಕಾರಣ ಜಿ.ಪಂ. ಕ್ಷೇತ್ರ ಹೆಚ್ಚಿಸಬೇಕು. ಇದರಿಂದ ಜನರಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ೭ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ, ೯.೫೦ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ ೨೮ ಚುನಾಯಿತ ಸದಸ್ಯರಿರುವ ಬಗ್ಗೆ ತಿದ್ದುಪಡಿ ತರಲಾಗಿದೆ. ಇದರಿಂದ ಶಾಸಕರ ಸಮಸ್ಯೆ ಬಗೆಹರಿಯಬಹುದು. ಸಮಸ್ಯೆಗೆ ಪರಿಹಾರ ದೊರೆಯದಿದ್ದಲ್ಲಿ ಪರ್ಯಾಯ ಕ್ರಮಕೈಗೊಳ್ಳಲಾಗುವುದು. ಇಡೀ ರಾಜ್ಯಕ್ಕೆ ಈ ತಿದ್ದುಪಡಿ ಅನ್ವಯಿಸುವುದರಿಂದ ವಿಶಾಲವಾಗಿ ಚಿಂತಿಸುವ ಅನಿವಾರ್ಯತೆ ಇದೆ. ಸರಕಾರದ ಮಟ್ಟದಲ್ಲಿ ವಿಮರ್ಶೆ ಮಾಡುತ್ತೇವೆ. ಮಲೆನಾಡು ಭಾಗಕ್ಕೆ ವಿನಾಯಿತಿ ನೀಡುವ ವಿಚಾರದಲ್ಲಿ ಶಾಸನಸಭೆ ಒಪ್ಪಿಗೆ ನೀಡಬೇಕು ಎಂದರು.