ಕಣಿವೆ, ಡಿ. ೧೧: ಅರಣ್ಯದೊಳಗೆ ಕಾಡಾನೆ ಗಳಾಗಲಿ, ಸಾಕಾನೆ ಗಳಾಗಲಿ ಹಸಿವು ನೀಗಿಸಿ ಕೊಳ್ಳಲು ಅಗತ್ಯವಿರುವ ಹಾಗೂ ಆನೆಗಳಿಗೆ ಪ್ರಿಯವಾಗಿರುವ ಗಿಡ ಮರಗಳಿಲ್ಲದ ಕಾರಣ ದೊಡ್ಡ ಹೊಟ್ಟೆಯ ಆನೆಗಳು ಹಸಿವಿನಿಂದ ಕಂಗೆಡುತ್ತಿವೆ. ಹಾಗಾಗಿಯೇ ದಿನಂಪ್ರತಿ ಮುಸ್ಸಂಜೆಯಾದೊಡನೆ ಕಾಡಿನಿಂದ ನಾಡಿನತ್ತ ರೈತರು ಬೆಳೆದಂತಹ ಕೃಷಿ ಫಸಲು ಅಥವಾ ತೋಟಗಾರಿಕಾ ಫಸಲನ್ನು ತಿಂದು ತುಳಿದು ಹಾನಿ ಮಾಡಿ ತೆರಳುತ್ತಿವೆ.
ಮನುಷ್ಯರ ಕಂಡು ಹೌಹಾರುವ ಕಾಡಾನೆಗಳಿಗೂ ಕಾಡಿನಲ್ಲಿ ಆಹಾರವಿಲ್ಲ. ಇನ್ನು ಮನುಷ್ಯರೊಡನೆ ದಿನಗಳೆವ ಸಾಕಾನೆಗಳಿಗೂ ಆಹಾರದ ಸೊಪ್ಪು - ಸೆದೆಗಳು ಸಿಗದ ಕಾರಣ ಸಾಕಾನೆಗಳನ್ನು ಪೋಷಿಸುವ ಅರಣ್ಯ ಇಲಾಖಾ ಸಿಬ್ಬಂದಿಗಳು ಕೃಷಿಕರ ತೋಟಗಳಲ್ಲಿ, ಹೊಲ ಗದ್ದೆಗಳಲ್ಲಿ ಬೆಳೆದು ನಿಂತಿರು ವಂತಹ ಆಲ, ಅರಳಿ, ಮಾವು ಮೊದಲಾದ ಮರಗಳ ಸೊಪ್ಪನ್ನು ಹುಡುಕಿ ರೆಂಬೆಗಳ ಸಹಿತ ಕಡಿದುರುಳಿಸಿ ವಾಹನಗಳಲ್ಲಿ ತಂದು ತಿನ್ನಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ದಿನವೊಂದಕ್ಕೆ ಬರೋಬ್ಬರಿ ೨೫೦ ರಿಂದ ೩೦೦ ಕೆಜಿ ಆಹಾರ ಹಾಗೂ ೧೦೦ ರಿಂದ ೧೨೦ ಲೀಟರ್ಗಳಷ್ಟು ನೀರು ಕುಡಿಯುವ ಆನೆಗಳಿಗೆ ಸಿಬ್ಬಂದಿಗಳು ಕೊಂಡೊಯ್ದು ತಿನ್ನಿಸುವ ಈ ಸೊಪ್ಪು ಯಾವುದಕ್ಕೂ ಸಾಕಾಗುವುದಿಲ್ಲ. ಅಂದರೆ ಬಳಲಿ ಬಾಯಾರಿ ಬಂದವಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತೆಯೇ ಸರಿ. ಆನೆಕಾಡು ಅರಣ್ಯದ ಸಿಬ್ಬಂದಿಗಳು ಹೆಬ್ಬಾಲೆ ಬಳಿಯ ತೋಪು ಒಂದರಲ್ಲಿ ಇದ್ದ ಬೃಹತ್ ಆಲದ ಮರವೊಂದಕ್ಕೆ ಹತ್ತಿ ಅದರಲ್ಲಿನ ರೆಂಬೆಗಳನ್ನು ಕಡಿದುರುಳಿಸಿ ವಾಹನಕ್ಕೆ ತುಂಬಿಸುತ್ತಿದ್ದ ಚಿತ್ರಣ ‘ಶಕ್ತಿ’ಗೆ ಗೋಚರಿಸಿತು.ಈ ಸಂದರ್ಭ ಮಾತನಾಡಿದ ಅರಣ್ಯ ಸಿಬ್ಬಂದಿ, ಏನು ಮಾಡೋದು ಸರ್, ನಮ್ಮ ಹೊಟ್ಟೆಯನ್ನು ತುಂಬಿಸುವ ಉದ್ಯೋಗಕ್ಕೆ ಈ ಆನೆಗಳು ಕಾರಣವಾಗಿವೆ. ಹಾಗೆಯೇ ಅವುಗಳ ಬಾಯಾರಿಕೆ ಹಾಗೂ ಹಸಿವು ನೀಗಿಸುವುದು ನಮ್ಮ ಕರ್ತವ್ಯಕ್ಕಿಂತ ಹೆಚ್ಚಾಗಿ ಧರ್ಮ ಅಲ್ಲವಾ ಸರ್ ಎಂದು ಮಮ್ಮಲ ಮರುಗಿ ಸಾಕಾನೆಗಳಿಗೆ ಈ ಸೊಪ್ಪು ಕೊಂಡೊಯ್ದು ನೀಡಿದ್ದು ಮಾತ್ರ ಖುಷಿಯಾದ ಸಂಗತಿ. ಆನೆಗಳಿಗೆ ಪ್ರಿಯವಾದ ಮರಗಳ ರೆಂಬೆ ಕೊಂಬೆಗಳನ್ನು ಕಡಿದು ಮರಗಳನ್ನು ಕಪಾತು ಮಾಡುವಂತಹ ತೋಟ ಬೆಳೆಗಾರರು ಇನ್ನು ಮುಂದೆ ಮರದ ಸೊಪ್ಪನ್ನು ಸಾಕಾನೆಗಳಿಗೆ ನೀಡಿದರೆ ತುಂಬಾ ಉಪಯುಕ್ತವಾಗುತ್ತದೆ. ಅರಣ್ಯ ಸಿಬ್ಬಂದಿಗಳ ಗಮನಕ್ಕೆ ತಂದರೆ ಅವರು ವಾಹನಗಳನ್ನು ತಂದು ಸೊಪ್ಪನ್ನು ಒಯ್ಯುತ್ತಾರೆ.
ಅರಣ್ಯಗಳಲ್ಲೂ ಬೆಳೆಯಲಿ : ಕಾಡಾನೆಗಳ ಹಾವಳಿ ಮಿತಿಮೀರಿರುವ ಈ ಸಂದರ್ಭದಲ್ಲಿ ಕಾಡಾನೆಗಳ ಹಸಿವು ನೀಗಿಸುವತ್ತ ಅರಣ್ಯ ಇಲಾಖೆ ಯೋಜನೆ ಹಮ್ಮಿಕೊಳ್ಳಬೇಕಿದೆ. ಅಂದರೆ ಕಾಡಾನೆಗಳು ಹೆಚ್ಚು ಇರುವ ಅರಣ್ಯಗಳಲ್ಲಿ ಪ್ರತ್ಯೇಕವಾದ ನೆಡುತೋಪುಗಳನ್ನು ನಿರ್ಮಿಸಿ ಸುತ್ತಲೂ ಒಂದಷ್ಟು ವರ್ಷಗಳು ಕಾಡಾನೆಗಳು ಬರದಂತೆ ಎಚ್ಚರವಹಿಸಿ, ಅವುಗಳಿಗೆ ಇಷ್ಟವಾದಂತಹ ಆಲದ ಮರ, ಅರಳೀ ಮರ, ಮಾವಿನ ಮರ, ಬಿದಿರು ಮೊದಲಾದ ಗಿಡಗಳನ್ನು ನೆಟ್ಟು ಮರಗಳಾಗಿ ಬೆಳೆಸುವ ದೀರ್ಘಾವಧಿ ಯೋಜನೆಗಳನ್ನು ಹಂತ ಹಂತವಾಗಿ ಕೈಗೊಂಡಲ್ಲಿ ಭವಿಷ್ಯದಲ್ಲಿ ಕಾಡಾನೆ ಮಾನವ ಸಂಘರ್ಷ ತಪ್ಪಿಸಿ ಅವುಗಳಿಗೆ ಬೇಕಾದ ತಿನಿಸಿನ ಮರಗಳನ್ನು ಬೆಳೆಸುವಂತಹ ಸಂಕಲ್ಪವನ್ನು ತೊಡಬೇಕಿದೆ.
-ಕೆ. ಎಸ್. ಮೂರ್ತಿ, ಮೊ:೯೪೪೮೮೯೬೩೯೫