ಸೋಮವಾರಪೇಟೆ, ಡಿ. ೧೦: ಕೆಲ ದಶಕಗಳ ಹಿಂದೆ ನಿರ್ಮಾಣವಾಗಿ ಪ್ರಸುತ್ತ ಶಿಥಿಲಾವಸ್ಥೆಗೆ ತಲುಪಿರುವ ಸಮೀಪದ ಐಗೂರು ಗ್ರಾಮದ ಕಬ್ಬಿಣ ಸೇತುವೆ ಮೂಲಕ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಲೋಕೋಪಯೋಗಿ ಇಲಾಖೆ ಸೂಚನಾ ಫಲಕ ಅಳವಡಿಸಿದೆ.

ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರು ಗ್ರಾಮದಲ್ಲಿರುವ ಕಬ್ಬಿಣ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಕೆಳಭಾಗದಲ್ಲಿ ಕಬ್ಬಿಣ ತುಕ್ಕು ಹಿಡಿದಿರುವುದರ ಜೊತೆಗೆ, ಸೇತುವೆಯ ಎರಡೂ ಕಡೆಗಳಲ್ಲಿ ಕಲ್ಲುಗಳು ಕಿತ್ತು ಬರುತ್ತಿವೆ. ಈ ನಡುವೆ ಕಳೆದ ಒಂದು ತಿಂಗಳ ಅಂತರದಲ್ಲಿ ಸೇತುವೆಗೆ ಸಂಪರ್ಕ ಹೊಂದಿರುವ ರಸ್ತೆಯ ಮಧ್ಯಭಾಗದಲ್ಲಿ ಎರಡು ಬಾರಿ ಮಣ್ಣು ಕುಸಿದು ಗುಂಡಿಗಳು ನಿರ್ಮಾಣಗೊಂಡಿದ್ದು, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿದೆ.

ಇದೀಗ ನೂತನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ರೂ.೧೦ ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು, ಇನ್ನಷ್ಟೇ ನೂತನ ಸೇತುವೆಯ ಕಾಮಗಾರಿ ಆರಂಭಗೊಳ್ಳಬೇಕಿದೆ.

ತಕ್ಷಣಕ್ಕೆ ಅನ್ವಯವಾಗುವಂತೆ ಈ ಸೇತುವೆಯ ಮುಖಾಂತರ ಭಾರೀ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಲೋಕೋಪಯೋಗಿ ಇಲಾಖೆ ಎಚ್ಚರಿಕೆ ಫಲಕವನ್ನು ಅಳವಡಿಸಿದೆ. ಆದರೂ ಸಹ ಪ್ರತಿ ದಿನ ಇದೇ ಸೇತುವೆಯ ಮೂಲಕ ಭಾರೀ ಸರಕು ಸಾಗಾಣಿಕೆಯ ವಾಹನಗಳು ತೆರಳುವುದು ಮಾಮೂಲಾಗಿದೆ.

ಸೋಮವಾರಪೇಟೆ, ಕೋವರ್‌ಕೊಲ್ಲಿ ಮಾರ್ಗವಾಗಿ ಐಗೂರು, ಕುಂಬೂರು, ಮಾದಾಪುರ, ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವೂ ಇದಾಗಿರುವುದರಿಂದ ಪ್ರತಿನಿತ್ಯ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಈ ನಡುವೆ ಭಾರೀ ಸರಕು ಸಾಗಾಣಿಕೆಯ ವಾಹನಗಳು, ಟಿಂಬರ್ ಮರಗಳನ್ನು ಸಾಗಿಸುವ ವಾಹನಗಳೂ ಸಹ ಇದೇ ಸೇತುವೆಯ ಮೂಲಕ ತೆರಳುತ್ತಿದ್ದು, ಲೋಕೋಪಯೋಗಿ ಇಲಾಖೆಯ ಸೂಚನಾ ಫಲಕಕ್ಕೆ ಬೆಲೆ ಇಲ್ಲದಂತಾಗಿದೆ. ಇಲಾಖೆ ಈ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.