ಮಡಿಕೇರಿ, ಡಿ. ೧೦: ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಹೇಗೆ ಮೂಲ ನಿವಾಸಿಗಳೋ ಹಾಗೇ ಕೊಡವ ಪ್ರಾಂತ್ಯಕ್ಕೆ ಕೊಡವರು ಮಾತ್ರ ಆದಿಮಸಂಜಾತರಾಗಿದ್ದಾರೆ. ಇಲ್ಲಿಗೆ ಬಂದು ನೆಲೆಸಿದವರು ಈ ನೆಲದ ನಾಗರಿಕರೇ ಹೊರತು ಸ್ಥಳೀಯರಲ್ಲ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.

ಅರೆಕಾಡು ಹೊಸ್ಕೇರಿ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಂವಿಧಾನದ ಆರ್ಟಿಕಲ್ ೨೪೪ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಪಡೆದುಕೊಳ್ಳುವುದು ನಮ್ಮ ಪ್ರಾಚೀನ ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ರಕ್ಷಿಸಲು ಸಹಕಾರಿಯಾಗಿದೆ ಎಂದರು.

ಮತದಾರರ ಪಟ್ಟಿಯಲ್ಲಿ ನಮೂದಿಸಿದವರನ್ನು ನಾಗರಿಕರೆಂದು ಪರಿಗಣಿಸಲಾಗುತ್ತದೆ. ಆದರೆ ಅವರು ನೆಲದ ಮೂಲನಿವಾಸಿಗಳಾಗಲು ಸಾಧ್ಯವಿಲ್ಲ. ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಹೇಗೆ ಸ್ಥಳೀಯರೋ ಹಾಗೇ ಕೊಡವರು ಕೊಡವ ಪ್ರಾಂತ್ಯಕ್ಕೆ ಸ್ಥಳೀಯರು. ಕೊಡವರಿಗೆ ಇತರೆಡೆ ಯಾವುದೇ ಪ್ರತ್ಯೇಕ ಸಾಂಸ್ಕೃತಿಕ ಮೂಲ ಅಥವಾ ಕೊಡವ ನೆಲವಿಲ್ಲ ಎಂದರು.

ನೆಲದ ಪೂರ್ವಿಕರ ಆನುವಂಶಿಕ ಸಾಮುದಾಯಿಕ ಭೂಮಿ, ದೇವಕಾಡ್, ಮಂದ್‌ಗಳು, ದೇವಾಲಯದ ಭೂಮಿ, ಗೋಮಾಳಗಳ (ಬಾಣೆ) ಭೌಗೋಳಿಕ, ಭೌತಿಕ ಮತ್ತು ಪರಿಸರ ಸಮತೋಲನವನ್ನು ಕೊಡವರು ಕಾಪಾಡಿಕೊಂಡು ಬಂದಿದ್ದಾರೆ.

ಸಿಎನ್‌ಸಿ ಸಂಘಟನೆ ಕಳೆದ ೩೩ ವರ್ಷಗಳಿಂದ ಕೊಡವರ ಸಾಂವಿಧಾನಿಕ ಭದ್ರತೆಗಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಪಡೆಯುವುದು ನಮ್ಮ ಏಕೈಕ ಗುರಿಯಾಗಿದೆ. ಸಿಎನ್‌ಸಿ ಯ ಈ ಬೇಡಿಕೆಯನ್ನು ಖ್ಯಾತ ಅರ್ಥಶಾಸ್ತçಜ್ಞ, ಮಾಜಿ ಕೇಂದ್ರ ಸಚಿವ ಪ್ರೊ.ಡಾ.ಸುಬ್ರಮಣಿಯನ್ ಸ್ವಾಮಿ ಅವರು ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.

ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಮಾತನಾಡಿ ಸಿಎನ್‌ಸಿಯ ಹೋರಾಟ ಮತ್ತು ಎನ್.ಯು.ನಾಚಪ್ಪ ಅವರ ಕೊಡವರ ಪರವಾದ ವಾದವನ್ನು ಶ್ಲಾಘಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕ್ಲಬ್ ವತಿಯಿಂದ ಎನ್.ಯು.ನಾಚಪ್ಪ ಹಾಗೂ ಹಿರಿಯ ಸಹಕಾರಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಲಬ್‌ನ ಹಿರಿಯ ಸದಸ್ಯ ಕುಕ್ಕೇರ ಕೇಶು ಉತ್ತಪ್ಪ, ನೆಲ್ಲಮಕ್ಕಡ ಪವನ್ ಮತ್ತಿತರ ಪ್ರಮುಖರು, ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.