*ಸಿದ್ದಾಪುರ ಡಿ. ೯: ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಸ್ವಾಧೀನದಲ್ಲಿದ್ದ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆ ವಶಕ್ಕೆ ಪಡೆದಿದೆ.

ಸರ್ವೆ ಸಂಖ್ಯೆ ೧೫/೭ ರಲ್ಲಿದ್ದ ಮೂರು ಎಕರೆ ಜಾಗವನ್ನು ಸರ್ವೆ ಕಾರ್ಯ ನಡೆಸಿದ ಅಧಿಕಾರಿಗಳು ವಶಕ್ಕೆ ಪಡೆದು ಬೇಲಿ ನಿರ್ಮಿಸಿದರು. ಖಾಸಗಿ ವ್ಯಕ್ತಿಯ ವಶದಲ್ಲಿರುವ ಸರ್ಕಾರಿ ಜಾಗವನ್ನು ವಶಪಡಿಸಿಕೊಂಡು ಕಡುಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿ ತಾ.ಪಂ ಮಾಜಿ ಸದಸ್ಯರುಗಳಾದ ಆನಂದ ರಘು, ಅಪ್ರು ರವೀಂದ್ರ ಹಾಗೂ ಹೊಸ್ಕೇರಿ ಗ್ರಾ.ಪಂ. ಮಾಜಿ ಸದಸ್ಯ ಪ್ರಭು ಶೇಖರ್ ಅವರುಗಳು ಈ ಹಿಂದೆ ಶಾಸಕರಾಗಿದ್ದ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದ್ದರು. ಆ ಸಂದರ್ಭ ಖಾಸಗಿ ವ್ಯಕ್ತಿ ಮೂರು ಎಕರೆ ಜಾಗ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದರು.

ಕಳೆದ ಹಲವು ವರ್ಷಗಳ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ ಎಂದು ತಿಳಿಸಿರುವ ಇವರುಗಳು, ವಶಪಡಿಸಿಕೊಂಡ ಜಾಗವನ್ನು ನಿವೇಶ ನಗಳನ್ನಾಗಿ ಪರಿವರ್ತಿಸಿ ನಿವೇಶನ ರಹಿತ ಕಡು ಬಡವರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಸಂದರ್ಭ ಕಂದಾಯ ಪರಿವೀಕ್ಷಕ ಚಂದ್ರಪ್ರಸಾದ್, ಗ್ರಾಮ ಲೆಕ್ಕಿಗ ಸಂದೀಪ್ ಶೆಣೈ, ಸರ್ವೆಯರ್ ಪ್ರದೀಪ್, ಗ್ರಾ.ಪಂ ಅಧ್ಯಕ್ಷೆ ಕವಿತ ಬಡುವಂಡ್ರ, ಉಪಾಧ್ಯಕ್ಷ ಚಿದಂಬರ ಎಂ.ಬಿ, ಮಾಜಿ ಅಧ್ಯಕ್ಷ ಪ್ರಭುಶೇಖರ್ ಬಿ.ವೈ, ಹಾಲಿ ಹಾಗೂ ಸದಸ್ಯರುಗಳು, ಗ್ರಾಮಸ್ಥರು ಹಾಜರಿದ್ದರು.

- ಅಂಚೆಮನೆ ಸುಧಿ