ಸೋಮವಾರಪೇಟೆ, ಡಿ. ೯: ರೂ. ೧.೩೭ ಕೋಟಿಗೂ ಅಧಿಕ ವೆಚ್ಚದಲ್ಲಿ ನವೀಕರಣಗೊಂಡಿರುವ ಇಲ್ಲಿನ ತಾಲೂಕು ಆಡಳಿತ ಸೌಧಕ್ಕೆ ಕೆಲಸ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ಸಮಸ್ಯೆಯಾಗು ತ್ತಿದ್ದರೂ ಅಧಿಕಾರಿ ವರ್ಗ ವ್ಯವಸ್ಥೆಗೆ ಮುಂದಾಗುತ್ತಿಲ್ಲ ಎಂದು ಗ್ರಾಮೀಣ ಪ್ರದೇಶದ ಮಂದಿ ಅಸಮಾಧಾನ ವ್ತಕ್ತಪಡಿಸಿದ್ದಾರೆ.

ಪ್ರತಿ ದಿನ ಕೆಲಸ ಕಾರ್ಯಗಳಿಗೆ ಆಗಮಿಸುವ ಮಹಿಳೆಯರು, ವೃದ್ಧರು, ಸಾರ್ವಜನಿಕ ರು ಶೌಚಾಲಯಕ್ಕಾಗಿ ಬಸ್ ನಿಲ್ದಾಣ, ಖಾಸಗಿ ಹೊಟೇಲ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶೌಚಾಲಯವನ್ನು ಅವಲಂಬಿಸಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಆಡಳಿತ ಸೌಧದಲ್ಲಿ ೪ ಶೌಚಾಲಯ ಇದ್ದು, ಇದರಲ್ಲಿ ಒಂದು ಶೌಚಾಲಯ ಎರಡನೇ ಮಹಡಿ ಯಲ್ಲಿದೆ. ಇದನ್ನು ಪುರುಷ ಸಿಬ್ಬಂದಿ ಉಪಯೋಗಿಸುತ್ತಿದ್ದು, ಮತ್ತೊಂದು ಶೌಚಾಲಯವನ್ನು ಮಹಿಳಾ ಸಿಬ್ಬಂದಿ ಉಪಯೋಗಿಸುತ್ತಿದ್ದಾರೆ. ಉಳಿದೆರಡು ಶೌಚಾಲಯಗಳು ದುಸ್ಥಿತಿ ತಲುಪಿದ್ದು, ಬಾಗಿಲು ಮುಚ್ಚಿದ್ದು ಇಲ್ಲಿಗೆ ಬರುವ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ. ಇದೇ ಕಟ್ಟಡದಲ್ಲಿ ಉಪ ನೋಂದಣಿ ಅಧಿಕಾರಿಯವರ ಕಚೇರಿಯೂ ಇದ್ದು ಇಲ್ಲಿಗೆ ದಿನನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ಮೂಲಭೂತ ಅಗತ್ಯತೆಗಳಲ್ಲಿ ಒಂದಾದ ಶೌಚಾಲಯವೇ ಇಲ್ಲದ್ದರಿಂದ ಪರದಾಡುವಂತಾಗಿದೆ. ತಕ್ಷಣ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಟ್ಟಡ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ. ಎರಡು ಶೌಚಗೃಹ ಗಳನ್ನು ಇಲಾಖೆಯ ಸಿಬ್ಬಂದಿಗಳು ಉಪಯೋಗಿಸಿಕೊಂಡು ಬೀಗ ಜಡಿಯುತ್ತಾರೆ. ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ನಲ್ಲಿರುವ ಶೌಚಗೃಹಕ್ಕೆ ಹೋದರೆ ಶೌಚಕ್ಕೆ ೫ ರೂ. ಕೊಡಬೇಕಾಗಿದೆ. ನಿನ್ನೆದಿನ ವೃದ್ಧೆಯೊಬ್ಬರು ತಡೆಯಲಾದರೆ, ವೆರಾಂಡದಲ್ಲೇ ಮೂತ್ರವಿಸರ್ಜನೆ ಮಾಡಿಕೊಂಡ ಪ್ರಸಂಗವೂ ನಡೆದಿದ್ದು, ಶೌಚಗೃಹ ವ್ಯವಸ್ಥೆ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಬಿಲ್ ಮಾಡಿಸಿ ಹಣ ಪಡೆದುಕೊಂಡಿದ್ದಾರೆ. ಆದರೆ ಸಂಪೂರ್ಣ ಕಾಮಗಾರಿ ಮುಗಿಸಿಲ್ಲ. ಪಿಟ್ ನೀರಿನ ವ್ಯವಸ್ಥೆ ಆಗಿದೆ. ಇನ್ನೊಂದಿಷ್ಟು ಕೆಲಸ ಬಾಕಿಯಿದೆ. ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಕಾಮಗಾರಿ ಮುಗಿಸಿದ ತಕ್ಷಣ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಎಂದಿನAತೆ ಸಬೂಬು ನೀಡಿದ್ದಾರೆ.