*ಸಿದ್ದಾಪುರ, ಡಿ. ೯: ರಸವತ್ತಾದ ಹಣ್ಣಿನಂತೆ ನಮ್ಮ ಬದುಕು ಹಸನಾಗುತ್ತದೆ ಎಂದೇ ನಿರೀಕ್ಷಿಸಿದ್ದ ಹಣ್ಣಿನ ಹಾಡಿಯ ಗಿರಿಜನರ ಜೀವನ ಅಕ್ಷರಶ: ಕೊಳೆಯುತ್ತಿದೆ! ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ, ಈ ಜನರ ದಯನೀಯ ಬದುಕು. ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯ್ತಿಗೆ ಸೇರುವ ವಾಲ್ನೂರು ಗ್ರಾಮದ ಹಣ್ಣಿನ ಹಾಡಿಯಲ್ಲಿ ಕಗ್ಗತ್ತಲು ತುಂಬಿಹೋಗಿದೆ. ಮುಖ್ಯವಾಹಿನಿಗೆ ಸೇರಿಕೊಳ್ಳಲಾಗದೆ ಹಿಡಿ ಜೀವಗಳು ಪ್ಲಾಸ್ಟಿಕ್ ಹೊದಿಕೆಯೊಳಗೆ ಮಿಸುಕುತ್ತಿವೆ!
ಸುಮಾರು ೧೭ ಕುಟುಂಬಗಳಿರುವ ಹಾಡಿಯಲ್ಲಿ ಕುಡಿಯುವ ನೀರು ಹಾಗೂ ರಸ್ತೆಯನ್ನುಳಿದರೆ, ಬೇರಿನ್ನಾವ ಸೌಲಭ್ಯವೂ ತಲುಪಿಲ್ಲ. ಸರ್ಕಾರದ `ಭಾಗ್ಯಜ್ಯೋತಿ’ಯನ್ನೇ ನೆಚ್ಚಿಕೊಂಡು ಬಂದ ಈ ಮಂದಿಗೆ, ಇದೀಗ ದೌರ್ಭಾಗ್ಯ ಕಾಡುತ್ತಿದೆ. ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಮನು ಮಹೇಶ್, ಸಮಸ್ಯೆಗಳನ್ನು ಒಂದಿಷ್ಟು ಸರಿಪಡಿಸಿ ವಿದ್ಯುತ್ ಸಿಗುವಂತೆ ಮಾಡಿದ್ದರು. ಆದರೆ, ಇಂದು ಆ ಎಲ್ಲ ಮನೆಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಸಂಜೆಯಾಗುತ್ತಿದ್ದAತೆಯೇ ಹಾಡಿಯಲ್ಲಿ ಗಿರಿಜನರ ಬದುಕು ಕೂಡಾ ಕಾರ್ಗತ್ತಲಿಗೆ ಜಾರುತ್ತದೆ. ಹಾಡಿಯ ಹರೀಶ- ರಾಣಿ ದಂಪತಿಯ ಪಡಿಪಾಟಲು ನೋಡಿದರೆ ಕಣ್ಣೀರೇ ಬರುತ್ತದೆ. ಕತ್ತಲ ದಿನಗಳಲ್ಲಿ ಮಳೆ ಬಂದರAತೂ ಇಬ್ಬರು ಪುಟಾಣಿಗಳನ್ನು ಕಂಕುಳಿಗೇರಿಸಿಕೊAಡು ಎಲ್ಲೆಂದರಲ್ಲಿ ಆಶ್ರಯಕ್ಕೆ ತಡಕಾಡಬೇಕು. ಇದ್ದ ಗುಡಿಸಲಿಗೆ ಈ ದಂಪತಿಯೇ ಶೀಟ್‌ಗಳನ್ನು ಏರಿಸಿ, ರಕ್ಷಣೆಗೆ ಪ್ಲಾಸ್ಟಿಕ್ ಹೊದೆಸಿ ಹೇಗೋ ಬದುಕು ಕಟ್ಟಿಕೊಂಡಿದ್ದಾರೆ.
ಈ ಹಾಡಿಯ ಜನರ ಮತ್ತೊಂದು ಬವಣೆಯೆಂದರೆ, ಬಹಿರ್ದೆಸೆಗೆ ಪರರ ಕಾಫಿ ತೋಟಗಳನ್ನು ಹುಡುಕಬೇಕು. ಬಯಲುಮುಕ್ತ ಶೌಚಾಲಯದ ಹೆಸರಿನಲ್ಲಿ ಕೇಂದ್ರ ಸರ್ಕಾರ ನೀಡುವ ಕೋಟ್ಯಂತರ ಅನುದಾನ ಹಣ್ಣಿನ ಹಾಡಿಯನ್ನು ಸ್ಪರ್ಶ ಕೂಡ ಮಾಡಿಲ್ಲ. ಪ್ರಕೃತಿಯ ಕರೆಗೆ ಕಾಫಿ ತೋಟಗಳನ್ನು ಹುಡುಕಿ ಹೊರಡುವ ಗಿರಿಜನರು, ಆನೆ ಧಾಳಿಗೆ ಸಿಲುಕಿಕೊಂಡರೂ ಕೇಳುವವರಿಲ್ಲ!
ಇಂತಹ ಹಲವು ಕಣ್ಣೀರ ಕತೆಗಳಿಗೆ ಸಾಕ್ಷಿಯಾಗುತ್ತಲೇ ಈ ನತದೃಷ್ಟರು ನಾಗರಿಕ ಸಮಾಜದಲ್ಲಿ ಉಳಿದುಕೊಂಡಿದ್ದಾರೆ. ಗಿರಿಜನರು ಈ ನೆಲದ ಹಕ್ಕುದಾರರಾಗಿದ್ದರೂ, ಇವರ ಮುಗ್ದತೆಯನ್ನೇ ಬಳಸಿಕೊಳ್ಳುವ ಅಧಿಕಾರಿಗಳು, ಜನಪ್ರತಿನಿಧಿಗಳ ಸ್ವಾರ್ಥ ಲಾಲಸೆಗಾಗಿ ಇವರನ್ನು `ಓಟ್ ಬ್ಯಾಂಕ್’ ಆಗಿಯೇ ಉಳಿಸಿಕೊಂಡಿರುವುದು ಸುಸ್ಪಷ್ಟ.
ಗಿರಿಜನರಿಗೆ ಸೌಲಭ್ಯಗಳನ್ನು ನೀಡಿದರೆ ಅವರು ಮುಖ್ಯವಾಹಿನಿಗೆ ತಲುಪಿಬಿಡಬಹುದು. ವ್ಯವಸ್ಥೆಯ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿರುವ ಗಿರಿಜನರ ಉದ್ಧಾರಕ್ಕೆ ಇಂದಲ್ಲ ನಾಳೆ ಮುಕ್ತಿ ಸಿಗಲಿ ಎಂಬುದೇ ಈ ವರದಿಯ ಆಶಯ.
- ಅಂಚೆಮನೆ ಸುಧಿ