ಸೋಮವಾರಪೇಟೆ, ಡಿ. ೯: ಖಾಸಗಿ ಬಸ್ನಲ್ಲಿ ಎಲ್ಲಿಂದಲೋ ಸೋಮವಾರಪೇಟೆಗೆ ಆಗಮಿ ಸಿದ್ದ ಉರಗವೊಂದು ಸಹ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರ ಆತಂಕಕ್ಕೆ ಕಾರಣವಾದ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಅಂತಿಮವಾಗಿ ಸ್ಥಳೀಯ ಉರಗ ರಕ್ಷಕ ರಘು ಅವರು ಸೆರೆಹಿಡಿದು ಮರಳಿ ಅರಣ್ಯಕ್ಕೆ ಬಿಡುವ ಮೂಲಕ ನಿಟ್ಟುಸಿರಿಗೆ ಕಾರಣರಾದರು.
ಕೊಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಖಾಸಗಿ ಬಸ್ಸು ಇಂದು ಮಧ್ಯಾಹ್ನ ಪಟ್ಟಣಕ್ಕೆ ಬಂದ ಸಂದರ್ಭ ಇಂಜಿನ್ ಸಮೀಪ ಹಾವೊಂದು ಕಾಣಿಸಿಕೊಂಡಿತು. ಇದರಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ನೇಕ್ ರಘು ಹಾವನ್ನು ಹಿಡಿದು ಪ್ರಯಾಣಿಕರ ಆತಂಕ ದೂರಮಾಡಿದರು. ಬಸ್ನಲ್ಲಿ ಪ್ರಯಾಣಿಸಿಕೊಂಡು ಬಂದಿರುವ ಹಾವು ಕೇರೆ ಹಾವಾಗಿದ್ದು, ಬಸ್ಸು ನಿಲ್ಲಿಸಿರುವಾಗ ಸೇರಿಕೊಂಡಿರುವ ಸಾಧ್ಯತೆ ಇದೆ. ಕೇರೆ ಹಾವಿನಿಂದ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಉರಗಗಳು ಜನವಸತಿ ಪ್ರದೇಶದಲ್ಲಿ ಕಂಡು ಬಂದರೆ ಮೊ. ೯೮೪೪೫೫೮೬೯೩ನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ಅವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ರಘು ತಿಳಿಸಿದ್ದಾರೆ.