ವೀರಾಜಪೇಟೆ, ಡಿ. ೯: ಸರ್ಕಾರಿ ಅನುದಾನಿತ ಕಾಕೋಟುಪರಂಬು ಪ್ರೌಢಶಾಲೆಯನ್ನು ವೀರಾಜಪೇಟೆ ಕೊಡವ ಸಮಾಜಕ್ಕೆ ಹಸ್ತಾಂತರಿಸುವ ವಿಚಾರದಲ್ಲಿ ಶಾಲಾ ಅಭಿವೃದ್ಧಿ ಅಧ್ಯಕ್ಷರು ಏಕಪಕ್ಷಿಯ ನಿರ್ಧಾರ ತೆಗೆದುಕೊಂಡಿರುವುದನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ಇತರ ಸದಸ್ಯರುಗಳು ತೀವ್ರವಾಗಿ ಖಂಡಿಸುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರೌಢಶಾಲೆಯನ್ನು ಯಾವುದೇ ಸಂಸ್ಥೆಗೆ ಪರಬಾರೆ ಅಥವಾ ಹಸ್ತಾಂತರ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಆಡಳಿತ ಸಮಿತಿ ಉಪಾಧ್ಯಕ್ಷ ಪೊಕ್ಕುಳಂಡ್ರ ಟಿ. ರಮೇಶ್ ಹೇಳಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕೋಟುಪರಂಬು ಪ್ರೌಢಶಾಲೆ ಕಳೆದ ೬೦ ವರ್ಷಗಳಿಂದ ಅಂದಾಜು ಐದು ಎಕರೆ ಜಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಉತ್ತಮವಾಗಿ ಕಾರ್ಯನಿರ್ವಸುತ್ತಿದೆ. ಇತ್ತೀಚೆಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಸಭೆ ಸೇರಿ ಶಾಲೆಯನ್ನು ಮುನ್ನಡೆಸಿಕೊಂಡು ಹೋಗಲಿಚ್ಚಿಸುವ ಯಾವುದಾದರು ಸಂಸ್ಥೆಗೆ ಹಸ್ತಾಂತರ ಅಥವಾ ಪರಬಾರೆ ಮಾಡುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಈ ವಿಚಾರದಲ್ಲಿ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಆಡಳಿತ ಸಮಿತಿ ನಿರ್ದೇಶಕ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕ ಐಚೆಟ್ಟಿರ ರಂಜಿ ಕುಟ್ಟಯ್ಯ ಮಾತನಾಡಿ, ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಶಾಲೆಯನ್ನು ಬೇರೆ ಸಂಸ್ಥೆಗೆ ಹಸ್ತಾಂತರ ಮಾಡುವ ಬಗ್ಗೆ ನವೆಂಬರ್ ೧೭ ರಂದು ವಿಶೇಷ ಮಹಾಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ಶಾಲೆಯ ಸ್ಥಿತಿಗತಿಯ ಬಗ್ಗೆ ಚರ್ಚಿಸಿ ಕಾನೂನು ಸಲಹೆ ಪಡೆದು ಕೆಲವು ನಿಬಂಧನೆಗಳಿಗೆ ಒಳಪಟ್ಟು ವೀರಾಜಪೇಟೆ ಕೊಡವ ಸಮಾಜದ ಅಧೀನದಲ್ಲಿರುವ ತ್ರಿವೇಣಿ ಶಾಲೆಗೆ ಹಸ್ತಾಂತರ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷರು ಮಹಾಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಗಾಳಿಗೆ ತೂರಿ ಯಾವುದೇ ಕಾನೂನಿನ ಸಲಹೆಗಳನ್ನು ಪಡೆಯದೆ ತಮಗೆ ಬೇಕಾದ ರೀತಿಯಲ್ಲಿ ವೀರಾಜಪೇಟೆ ಕೊಡವ ಸಮಾಜಕ್ಕೆ ಪತ್ರ ಬರೆದಿದ್ದು, ಇದರಲ್ಲಿ ಶಾಲೆಯ ಸ್ಥಿರಾಸ್ಥಿ, ಚರಾಸ್ಥಿ ಉಳಿಸಿಕೊಂಡು ಅದೇ ಸಿಬ್ಬಂದಿಗಳನ್ನು ಮುಂದುವರಿಸಿಕೊಳ್ಳುವ ಅಂಶಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ ಹೊರತು ಶಾಲೆಯನ್ನು ಮುನ್ನಡೆಸುವ ಯಾವುದೇ ಅಂಶ ಅದರಲ್ಲಿ ಉಲ್ಲೇಖವಾಗಿಲ್ಲ ಹಾಗೂ ವೀರಾಜಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಯನ್ನು ಮುಂದುವರೆಸಿಕೊAಡು ಹೋಗಲು ಸಿದ್ದರಿಲ್ಲ ಎಂಬ ಮಾಹಿತಿಯನ್ನು ಬಲ್ಲಮೂಲಗಳಿಂದ ತಿಳಿದುಕೊಂಡಿದ್ದೇವೆ. ಇದರಿಂದ ನಮ್ಮ ಶಾಲೆಯನ್ನು ನಾವೇ ಮುನ್ನಡೆಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ವಿ.ಜಿ ಗೋಪಾಲಕೃಷ್ಣ, ಗುಡ್ಡಂಡ್ರ ಯು ಪೊನ್ನಪ್ಪ ಉಪಸ್ಥಿತರಿದ್ದರು.