‘ಕುಡಿಯ’ ಒಂದು ಜಾತಿಯೇ ? ಇದರ ಉತ್ತರ ಅಷ್ಟು ಸುಲಭವಲ್ಲ. ಇವರ ವೃತ್ತಿಯಿಂದ ಈ ಹೆಸರು ಬಂದಿದೆ ಎನ್ನುವುದೇ ಅಧ್ಯಯನದಲ್ಲಿ ಕಂಡು ಬಂದ ಅಂಶ. ಹಲವು ಸಮುದಾಯಗಳಲ್ಲಿ ವೃತ್ತಿಯಿಂದ ಅದಕ್ಕೆ ಪೂರಕವಾಗಿ ಹೆಸರು ಬಂದಿರುವುದನ್ನು ಗಮನಿಸಬಹುದು.

ಹಾಗಾದರೆ, ಕುಡಿಯ ಎನ್ನುವ ಪದದ ಬಗ್ಗೆ ಪರಿಶೀಲಿಸೋಣ. ಕೊಡವ ಭಾಷೆಯಲ್ಲಿ `ಕುಡಿಯ’ ಎಂದರೆ ಕುಡಿಯುವವರು ಎಂದರ್ಥ. ಹಿಂದೆ ಕೊಡಗಿನಲ್ಲಿ ಸಾರಾಯಿ ಅಥವಾ ಮದ್ಯ ಇರಲಿಲ್ಲ. ಸೇಂದಿ ಸಾಮಾನ್ಯವಾಗಿತ್ತು. ಕೊಡಗಿನ ಎಲ್ಲೆಡೆಗಳಲ್ಲಿ ಪನೆ (ಬೈನೆ) ಮರಗಳಿದ್ದವು. ಅವುಗಳಿಂದ ಸೇಂದಿ ಇಳಿಸಿ ಕುಡಿಯುತ್ತಿದ್ದರು. ಹೆಚ್ಚು ಕುಡಿಯುವವರನ್ನು `ಕಳ್ಳು ಕುಡಿಯ’ ಎನ್ನುತ್ತಿದ್ದರು. ಅಂದರೆ, ಸೇಂದಿಗೆ ಸಂಬAಧಿಸಿದ ಪದವೇ ಕುಡಿಯ. ಇವರು ಕುಡಿಯುವವರು ಮಾತ್ರವಲ್ಲ, ಕುಡಿಯುವ ಸೇಂದಿಯನ್ನು ಇಳಿಸುವವರು ಕುಡಿಯರಾದರು.

ಹಿಂದೆ ಮಲೆ ಕಾಡಿನಲ್ಲಿ ವ್ಯಾಪಕವಾಗಿ ಸೇಂದಿ ದೊರೆಯುತ್ತಿತ್ತು. ಇಂದಿನ ಕುಡಿಯ ಯುವಜನತೆಯನ್ನು ಮಾತನಾಡಿಸುವಾಗ ಹಿಂದೆ ನಮ್ಮ ಹಿರಿಯರ ದಿನಚರಿ ಆರಂಭವಾಗುತ್ತಿದದ್ದೇ ಮರವೇರಿ ಕುಡಿಕೆಯ `ಬೊಳ್ಳೆಕಳ್ಳ್’ ಕುಡಿಯುವುದರಿಂದ. ಇದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ವೈಜ್ಞಾನಿಕ ವಾಗಿ ಸಾಬೀತಾಗಿದ್ದರೂ, ಬೆಳಗ್ಗೆ ಕುಡಿಯುತ್ತಿದ್ದ ಹಿನ್ನೆಲೆಯಲ್ಲಿ ಅದರ ಮತ್ತಿನಲ್ಲಿ ಮಂಕಾಗಿರುತ್ತಿದ್ದರು. ಅವರಿಗೆ ಅದೇ ಬದುಕು ಸಾಕಾಯಿತು. ಅವರು ಮಲೆಯಿಂದ ಹೊರಗೆ ಬರುವ, ಮುಖ್ಯವಾಹಿನಿಯಲ್ಲಿ ಸೇರಬೇಕು ಎನ್ನುವ ಚಿಂತನೆಯನ್ನೇ ಮಾಡಲಿಲ್ಲ ಎಂದು ಹೇಳುತ್ತಾರೆ.

ಕುಡಿಯರು ಸೇಂದಿ ಇಳಿಸುವ ವೃತ್ತಿಯಲ್ಲಿ ಪಳಗಿದವರು. ಬೊಳ್ಳೆಕಳ್ಳ್ ಇಳಿಸುವವರು ಹಾಗೂ ಕುಡಿಯುವವರು ಕುಡಿಯರಾದರು ಎನ್ನಲಾಗುತ್ತಿದೆ. ಕೇವಲ ಮನುಷ್ಯರಿಗೆ ಮಾತ್ರವಲ್ಲ, ದೇವರ ಉತ್ಸವ, ಜಾತ್ರೆಗಳಿಗೆ ಕೂಡ ಕಡ್ಡಾಯವಾಗಿ ಬೊಳ್ಳೆಕಳ್ಳ್ ವಿತರಿಸಬೇಕಿತ್ತು. ಈಗಲೂ ಕೂಡ ಪನ್ನಂಗಾಲತಮ್ಮೆ ಸೇರಿದಂತೆ ಹಲವು ದೇವರುಗಳ ಉತ್ಸವದಂದು ಬೊಳ್ಳೆಕಳ್ಳ್ ಅನ್ನು ಕುಡಿಯರು ತಂದುಕೊಡಲೇಬೇಕು ಎನ್ನುವ ನಿಯಮವಿದೆ. ಇವರ ಮಲೆಕಾಡುಗಳಿಗೆ ಊರಿನಿಂದ ಬೊಳ್ಳೆಕಳ್ಳ್ಗಾಗಿ ಜನರು ತೆರಳುತ್ತಿದ್ದರು. ಕುಡಿಯರು ಬೊಳ್ಳೆಕಳ್ಳ್ ಮರದಿಂದ ಇಳಿಸಿ ಊರಿಗೆ ಮೋಪೆಯಲ್ಲಿ ತಂದು ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ತಿಂಗಳಿಗೆ ಇಲ್ಲವೇ ವರ್ಷಕ್ಕೆ ಒಮ್ಮೆ, ಅಕ್ಕಿ, ಬೆಲ್ಲ ಹಾಗೂ ಇನ್ನಿತರ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದರು. ಬೊಳ್ಳೆಕಳ್ಳ್ ಕುಡಿಯಲು ತರುತ್ತಿದ್ದವರು `ಕುಡಿಯ’ರಾದರು ಎನ್ನುವ ವಿಶ್ಲೇಷಣೆ ಇದೆ.

ಕೇವಲ ಕುಡಿಯರಿಗೆ ಮಾತ್ರವಲ್ಲ, ಕೊಡಗಿನಲ್ಲಿ ಬೇರೆ ಬೇರೆ ವೃತ್ತಿಯಲ್ಲಿ ಇರುವವರಿಗೆ ಅದಕ್ಕೆ ತಕ್ಕಂತೆ ಹೆಸರು ಬಂದಿದೆ. ತೆರೆ ಕಟ್ಟುವವರಿಗೆ ಬಣ್ಣಂಗ, ಭವಿಷ್ಯ ಅಂದರೆ ಕಣಿ ಹೇಳುವವರಿಗೆ ಕಣಿಯ, ಮಡಿ ಮಾಡುವವರಿಗೆ ಮಡಿವಾಳ, ಮರದ ಹಾಗೂ ನಾಜೂಕಿನ ಕೆಲಸ ಮಾಡುವವರಿಗೆ ಐರಿ.. ಹೀಗೆ.. ಸಾಕಷ್ಟು ಸಮುದಾಯಗಳನ್ನು ಕಾಣಬಹುದು. ಇಂದು ಈ ವೃತ್ತಿ ಅಲ್ಲದಿದ್ದರೂ ಹಿಂದಿನ ಕಾಲದ ವೃತ್ತಿಯಿಂದ ಹೆಸರು ಬಂದಿದೆ ಎಂದು ಅಧ್ಯಯನಕಾರರು ತಿಳಿಸುತ್ತಾರೆ.

ಕೊಡಗು ಮಾತ್ರವಲ್ಲದೆ ಪ್ರಪಂಚದ ನಾನಾ ಭಾಗಗಳಲ್ಲಿ ವೃತ್ತಿಗೆ ತಕ್ಕ ಸಮುದಾಯದ ಹೆಸರುಗಳಿವೆ. ನಟನೆ ಹಾಗೂ ನೃತ್ಯ ಮಾಡುವ ಸಮುದಾಯವನ್ನು `ನಟುವರು’, ಇಲಿ ಹಿಡಿಯುವವರನ್ನು `ಇಲ್ಲಿಗರು’ ಎಂದು ಕರೆಯುತ್ತಾರೆ. ಅದೇ ರೀತಿ ಕುಡಿಯುವ ಬೊಳ್ಳೆಕಳ್ಳ್ ತರುವವರು `ಕುಡಿಯ’ರಾದರು. ದೇವರಿಗೆ ಬೊಳ್ಳೆಕಳ್ಳ್ ಇಳಿಸಿ ಕೊಡುವುದಕ್ಕಾಗಿಯೇ ಕುಡಿಯರ ಸೃಷ್ಟಿಯಾಗಿದೆ ಎಂದು ಅವರು ನಂಬುತ್ತಾರೆ. ಅವರ ಸೃಷ್ಟಿಯಾಗಿರುವುದೇ ಪನೆಮರ (ಈಚಲು)ದಲ್ಲಿ, ಅವರು ವಾಸಿಸುತ್ತಿದ್ದದ್ದು ಕೂಡ ಅಲ್ಲಿಯೇ ಎಂದು ಮೂಲ ಕಥೆಯನ್ನು ಹೇಳುತ್ತಾರೆ. ಅವರಿಗೆ ನೆಲದ ಸ್ಪರ್ಶವೇ ಇರಲಿಲ್ಲವಂತೆ. (ಮಂಗನಿAದ ಮಾನವ ಎನ್ನುವ ಮನುಷ್ಯನ ಮೂಲಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ).

ಕುಡಿಯುವ ಬೊಳ್ಳೆಕಳ್ಳ್ನ ಕುರಿತು ಅವರಲ್ಲಿ ಗೀತೆಯೇ ಇದೆ. ಎಷ್ಟೋ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಬೊಳ್ಳೆಕಳ್ಳ್ ಬಾರದಿದ್ದಲ್ಲಿ ದೇವರ ಜಾತ್ರೆಗಳೇ ನಡೆಯುವುದಿಲ್ಲ. ಇದು ಶತಮಾನಗಳಿಂದ ನಡೆದು ಬಂದ ಪದ್ಧತಿ. ಈ ಹಿನ್ನೆಲೆಯಲ್ಲಿ ಕುಡಿಯರಿಗೂ ಬೊಳ್ಳೆಕಳ್ಳ್ಗೂ ಶತಮಾನಗಳ ಸಂಬAಧ ಇರುವುದನ್ನು ಕಾಣಬಹುದು. ಇದಕ್ಕೆ ಸಾಕ್ಷಿಯಾಗಿ ಅವರಲ್ಲಿರುವ ಜಾನಪದ ಹಾಡುಗಳೇ ಸಾಕ್ಷಿ.

`ಆಮಲೆ ಈ ಮಲೆ ಬೊಟ್ಟತ್ ಮಲೆ

ಬೊಟ್ಟತ್ ಮಲೆಲ್ ಬಟ್ಟಿಪನೆಯೋ

ಬಟ್ಟಿ ಮನೆಯಿಲ್ ಮೂಪಾನಿ ಕಳ್ಳ್

ತೆಕ್ಕೋಟಿ ತೆರಿಪ ಕಳ್ಳ್ಲಾ ನೋಟಿ’

`ಆ ಮಲೆ ಈ ಮಲೆ ಬೊಟ್ಟತ್ ಮಲೆ

ಬೊಟ್ಟತ್ ಮಲೆಯಿಲ್ ಬಟ್ಟಿ ಪನೆಯೋ

ಭೀಮಂಗಯಿಲ್ ಮೂಪಾನಿ ಕಳ್ಳ್

ತಮ್ಚಚ್ಚ ದೇವಂಗ್ ಮೂಚಳ್ಳೆ ಕಳ್ಳ್’

ಹೀಗೆ ಬೊಳ್ಳೆಕಳ್ಳ್ ಕುರಿತು ಕೊನೆಯೇ ಇಲ್ಲದಂತೆ ಕವಿತೆ ಕಟ್ಟಿ ಕುಡಿಯರು ದಿನವಿಡೀ ಹಾಡಬಲ್ಲರು. ಇದರಲ್ಲಿ ಅವರಿಗೆ ಬೊಳ್ಳೆಕಳ್ಳ್ ಕುರಿತು ಇರುವ ಅಭಿಮಾನವನ್ನು ಕಾಣಬಹುದು

`ಊರ್‌ನಾಡ್‌ಕ್ ಬೋಂಡು ಕಳ್ಳ್ಲಾ ನೋಟಿ

ಕೊಯ್ಯುವಂಗೂ ಕಡ್‌ತ್‌ವಂಗೂ ಕಳ್ಳೇ ದೇವಾ

ಬಾಟ್‌ನ ಬಾಟ್‌ನ ಮೂಕ್ ಮುರ್‌ಚ

ಮಿಂಞಬುದ್ದ್ ಕಳ್ಳ್ ತೇಂಗೂಡಿ ಕಳ್ಳ್

ದೇವಕ್ ಒತ್ತೋರ್ ಮುತ್ತಪ್ಪ ಕಳ್ಳ್’

ಇದರಲ್ಲಿ ಊರು ಹಾಗೂ ನಾಡಿಗೆ ಬೊಳ್ಳೆಕಳ್ಳ್ ನೀಡುತ್ತಿದ್ದದ್ದು, ಕೇವಲ ಮನುಷ್ಯರಿಗೆ ಮಾತ್ರವಲ್ಲ, ದೇವರಿಗೂ ಇದು ಅಗತ್ಯ, ಇಳಿಸುವವರಿಗೆ, ಸಾಗಿಸುವವರಿಗೆ ಕಳ್ಳು ದೇವರು ಎನ್ನುತ್ತಾರೆ. ಇದರಲ್ಲಿ ಬೊಳ್ಳೆಕಳ್ಳ್ ಎನ್ನುವುದು ತಮ್ಮ ಬದುಕು ಎನ್ನುವ ಅಭಿಮಾನವಿದೆ. ಅದೇ ಅವರಿಗೆ ದೇವರು.

`ಬಾಟ್‌ನ ಬಾಟ್‌ನ ಮೂಕ್ ಮುರ್‌ಚ, ದೇವಕ್ ಒತ್ತೋರ್ ಮುತ್ತಪ್ಪ ಕಳ್ಳ್’ ಎನ್ನುವ ಎರಡು ವಾಕ್ಯದಲ್ಲಿ ಬೊಳ್ಳೆಕಳ್ಳ್ ಅನ್ನು ಯಾವ ರೀತಿ ಸೃಷ್ಟಿಸುತ್ತಾರೆ ಎನ್ನುವ ವಿವರವಿದೆ. ಅದು ದೇವರಿಗೆ ಇಷ್ಟವಾದ ಕಳ್ಳು ಎನ್ನುತ್ತಾರೆ.

`ಕಳ್ಳುಂಡಾ ಕಳ್ಳುಂಡಾ ಚೊಟ್ಟಂಗುಡಿಯಾ ?

ನೆಲ್ಲ್ಂಡೇAಗಿ ಕಳ್ಳುಂಡ್ ಊರ್‌ಕೋಡೋರೆ’

ಇದು ಕೊಡವ ಹಾಗೂ ಕುಡಿಯರ ಮಾತಿನ ರೀತಿ. ಮಲೆಗೆ ಕಳ್ಳು ಅರಸಿ ಬಂದ ಕೊಡವ ಬೊಳ್ಳೆಕಳ್ಳ್ ಇದೆಯೇ ಎಂದು ಕುಡಿಯನನ್ನು ಕೇಳುತ್ತಾನೆ. ಆಗ ಕುಡಿಯ ನೆಲ್ಲು ಅಂದರೆ ಭತ್ತ ಕೊಟ್ಟಲ್ಲಿ ಕಳ್ಳು ಇದೆ ಎಂದು ಹೇಳುವುದು. ಕೊಳ್ಳು ಕೊಡು ವ್ಯವಹಾರವನ್ನು ಅಂದಿನ ವೃತ್ತಿಯನ್ನು ಸೂಚಿಸುತ್ತಿದೆ. ಬೊಳ್ಳೆಕಳ್ಳ್ ನೀಡಿ ಭತ್ತ ಪಡೆಯುತ್ತಿದ್ದರು ಎನ್ನುವುದು ಸಾಬೀತಾಗುತ್ತದೆ.

ಇಂತಹ ಹಾಡು ಕುಡಿಯರಲ್ಲಿ ಸಾಕಷ್ಟಿದೆ. ಇಂದಿನ ಯುವ ಜನಾಂಗ ಈ ಹಾಡುಗಳ ಕುರಿತು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಕುಡಿಯರಲ್ಲಿ ಅದ್ಭುತ ಜಾನಪದ ಗಾಯಕರಿದ್ದರು. ಅವರು ಒಮ್ಮೆ ಕುಳಿತರೇ ದುಡಿ ಬಾರಿಸುತ್ತಾ ರಾತ್ರಿ ಇಡೀ ಹಾಡುತ್ತಿದ್ದರು. ಅವರೊಂದಿಗೆ ಸಾಕಷ್ಟು ಹಾಡುಗಳು ಕಣ್ಮರೆ ಯಾದರೂ ಅವುಗಳನ್ನು ಮೊಟ್ಟ ಮೊದಲ ಬಾರಿಗೆ ಸಂಗ್ರಹಿಸಿ ಅಕ್ಷರ ರೂಪದಲ್ಲಿ ದಾಖಲಿಸಿಟ್ಟಿರುವ ಹೆಮ್ಮೆ ನನಗೆ. ಮುಂದಿನ ದಿನಗಳಲ್ಲಿ ಅದರ ವಿಶೇಷತೆಯನ್ನು ಶಕ್ತಿ ಓದುಗರಿಗೆ ನೀಡಲಾಗುವುದು. (ಮುಂದುವರಿಯಲಿದೆ)

- ಐತಿಚಂಡ ರಮೇಶ್ ಉತ್ತಪ್ಪ, ಮೈಸೂರು

iu.ಡಿಚಿmesh@gmಚಿiಟ.ಛಿom