ಇಂದು ಭ್ರಷ್ಟಾಚಾರ ವಿರೋಧಿ ದಿನ
ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆಗಳು ಯಾವುದೂ ಪೂರ್ಣ ಪ್ರಮಾಣದ ಯಶಸ್ಸು ಗಳಿಸಿದ ನಿದರ್ಶನಗಳಿಲ್ಲ. ಹಾಗೇನಾದರೂ ಆಗುತ್ತಿದ್ದರೆ ಬಹುಶಃ ಹೊಸ ಹೊಸ ಚಿಂತನೆಗಳು, ಕನಸುಗಳ ಸಾಕಾರದಲ್ಲಿ ಇಡೀ ದೇಶದ, ಜನಜೀವನದ ಚಿತ್ರಣವೇ ಬದಲಾಗುತ್ತಿತ್ತು. ಭ್ರಷ್ಟತೆ ನಮ್ಮ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಂಟಕ ಪ್ರಾಯವಾಗಿರುವ ಮೂಲ ತೊಡಕು. ಅಂಗೈಯಲ್ಲಿರುವ ಹುಣ್ಣಿಗೆ ಕನ್ನಡಿಯೇಕೆ ಎಂಬAತೆ ಕಣ್ಣಿಗೆ ಕಾಣುವ, ಅನುಭವಕ್ಕೆ ಬರುವ ಪ್ರತಿ ವಿಚಾರಗಳು ಬಹುತೇಕ ಇದೊಂದೇ ಸಮಸ್ಯೆಯಲ್ಲಿ ಸಿಲುಕಿ, ಬಳಲಿ ಕೊನೆಗೆ ಒಂದು ರೀತಿಯ ನಿರಾಶಾದಾಯಕ ಸ್ಥಿತಿಯಲ್ಲಿ ಮುಕ್ತಾಯಗೊಳ್ಳುತ್ತಿದೆ. ಭ್ರಷ್ಟ ವ್ಯವಸ್ಥೆ ನಮ್ಮ ಜನಸಾಮಾನ್ಯರ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿದೆ, ಬೀರುತ್ತಿದೆ ಎನ್ನುವುದು ನಿಜಕ್ಕೂ ಯೋಚಿಸಬೇಕಾದ, ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗಂಭೀರ ಸಮಸ್ಯೆ.
ಭ್ರಷ್ಟತೆ ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಶುರುವಾಗುತ್ತದೆ. ಮಗುವಿನ ಆರೈಕೆಗಾಗಿ ಸರಕಾರದಿಂದ ಸಿಗುವ ಸೌಲಭ್ಯಗಳಿಂದ ಹಿಡಿದು ಮಗುವಿನ ಜನನದ ನಂತರ ಸಿಗಬೇಕಾದ ಉಚಿತ ಸೌಲಭ್ಯಗಳು ಫಲಾನುಭವಿಗಳಿಗೆ ಸಿಗಬೇಕಾದರೆ ಅವರು ಪಡುವ ಪಾಡು, ಪರದಾಡುವ ಸ್ಥಿತಿಯನ್ನು ನೋಡುವಾಗ ನಮ್ಮ ಹದಗೆಟ್ಟ ಸ್ಥಿತಿಯ ಚಿತ್ರಣ ಸಿಗುತ್ತದೆ. ಮುಂದೆ ಆ ಮಗುವಿನ ಸರ್ವಾಂಗೀಣ ವ್ಯಕ್ತಿತ್ವಕ್ಕೆ ರೂಪು ನೀಡುವ ಶಿಕ್ಷಣ ಕ್ಷೇತ್ರದ ಅತಿ ಪುಣ್ಯ ಪ್ರದಾಯಕ ಕಾರ್ಯವಾದ ವಿದ್ಯಾದಾನದಲ್ಲಿಯೂ ಅನ್ಯಾಯ, ಅಕ್ರಮಗಳು ನಡೆಯುತ್ತಿವೆ. ಖಾಸಗಿ ಶಾಲೆಗಳಲ್ಲಿ ಹೆಸರಿಗಾಗಿ, ಹಣಗಳಿಕೆಗಾಗಿ ಶಿಕ್ಷಣದ ಹೆಸರಿನಲ್ಲಿ ಪೋಷಕರಿಂದ ಫೀಸ್ ರೂಪದಲ್ಲಿ ಹಣ ಸುಲಿಯುತ್ತಾರೆ. ಶಿಕ್ಷಣ ಎನ್ನುವುದು ವ್ಯಾಪಾರವೇ ಆಗಿಬಿಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಶಿಕ್ಷಿತರಾಗಿ ಹೊರಗೆ ಬರುವ ಹೆಚ್ಚಿನ ವಿದ್ಯಾರ್ಥಿ ವೃಂದದಲ್ಲಿ ಯಾವ ನೈತಿಕ ಮೌಲ್ಯವನ್ನು ಕಾಣಲು ಸಾಧ್ಯ?
ಪ್ರತಿಭೆಗೆ ತಕ್ಕ ಮನ್ನಣೆ ಸಿಗಬೇಕು. ತನ್ನಲ್ಲಿರುವ ಸಾಮರ್ಥ್ಯವೇ ತನ್ನ ಗೌರವಕ್ಕೆ ಮಾನದಂಡ ಎಂಬ ಸತ್ಯ ಮಕ್ಕಳಿಗೆ ಅರಿವಿಗೆ ಬರುವಂತಾಗಬೇಕು. ಇದರ ಆಧಾರದ ಮೇಲೆಯೇ ಮಗುವನ್ನು ಮನೆ, ಶಾಲೆ, ಸಮಾಜದ ವ್ಯಾಪ್ತಿಯಲ್ಲಿ ಗುರುತಿಸುವ, ಮಾನ್ಯತೆ ನೀಡುವ ಸ್ಥಿತಿ ಒದಗಬೇಕು. ಹಾಗಾದರೆ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಈ ಮೌಲ್ಯಗಳು ಸ್ವಭಾವ ಸಿದ್ಧವಾಗಬಲ್ಲದು.
ಮಗುವಿನ ಪ್ರತಿಭೆಗೆ, ಸಾಮರ್ಥ್ಯಕ್ಕೆ ಸಲ್ಲುವ ಸ್ಥಾನಮಾನಗಳು ಅಡಗಿರುವ ಗುಪ್ತ ಚೈತನ್ಯವನ್ನು ಪ್ರಕಾಶಿಸುವಂತೆ ಮಾಡುತ್ತವೆ. ಶಾಲಾ ಚಟುವಟಿಕೆಗಳಲ್ಲಿ ಮುಂದಾಳತ್ವ ವಹಿಸಬಲ್ಲ, ಸಾಮೂಹಿಕವಾಗಿ ಅರಿತು ಬೆರೆತು ಸಹಕಾರದಿಂದ ಮುನ್ನಡೆಯುವ ಮಕ್ಕಳನ್ನು ಪ್ರೋತ್ಸಾಹಿಸಿ ಬೆಂಬಲಿಸಬೇಕು. ಇದು ರಾಷ್ಟçದ ಹಿತಕ್ಕಾಗಿ ದುಡಿಯಲು ಸಮರ್ಥ ನಾಯಕರನ್ನು ಸೃಷ್ಟಿಸುವ, ಭದ್ರ ಅಡಿಪಾಯವನ್ನು ಒದಗಿಸಬೇಕಾದ ಪ್ರಮುಖ ಘಟ್ಟ. ಆದರೆ ದುರದೃಷ್ಟವಶಾತ್ ಇಲ್ಲಿಯೇ ಮಕ್ಕಳು ಈ ರೀತಿಯ ನಿರಾಸೆ, ಸೋಲಿನಿಂದ ಕಂಗೆಡುವ ವಾತಾವರಣವಿದೆ. ಹಾಗಾಗಿ ಆಯ್ಕೆ, ಫಲಿತಾಂಶಗಳು ಅವರನ್ನು ಕೂಡ ನಿರಾಸೆಯ ಕೂಪಕ್ಕೆ ತಳ್ಳುವಂತೆ ಮಾಡುತ್ತದೆ ಎಂದಾದ ಮೇಲೆ ಇಡೀ ವ್ಯವಸ್ಥೆ ಇದಕ್ಕೆ ಉತ್ತರ ನೀಡಬೇಕು.
ಪರಿಸ್ಥಿತಿಯ ಲಾಭವನ್ನು ಹೇಗೆ ಪಡೆದುಕೊಳ್ಳುವುದೆಂಬ ಗಿಮಿಕ್ಗಳು ತಲೆಯಲ್ಲಿ ಬೇಡದ, ಅತಿರೇಕದ ಆಲೋಚನೆಗಳ ಮೂಲ ಇಲ್ಲಿಂದಲೇ ಪ್ರಾರಂಭ. ರಾಜ ಮಾರ್ಗದಲ್ಲಿ ಹೆಮ್ಮೆಯಿಂದ ಬೀಗುತ್ತಾ ನಡೆಯಬೇಕಾದ ಯುವ ಸಮೂಹಕ್ಕೆ ವಾಮ ಮಾರ್ಗಗಳ ಸರಳೋಪಾಯಗಳನ್ನು ನೀಡುವವರು ಯಾರು?
ಈ ಬೆಳವಣಿಗೆ ಸಮಾಜದಲ್ಲಿ ಶಾಂತಿಯುತ ವಾತಾವರಣಕ್ಕೆ ಮೊದಲ ಅಡ್ಡಿಯೇನೋ ಅನ್ನಿಸುತ್ತದೆ. ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕರೆ ಎಲ್ಲರೂ ನಿರೀಕ್ಷಿಸುವ ಶಾಂತಿ ತತ್ವಕ್ಕೆ ನ್ಯಾಯ ಒದಗಿಸಿದಂತೆ. ಯಾವ ಕಾರ್ಯವೇ ಆಗಲಿ ಪ್ರಾರಂಭಿಕ ಹಂತದಲ್ಲಿಯೇ ತನ್ನ ವ್ಯಾವಹಾರಿಕ ದೃಷ್ಟಿಕೋನದಂತೆ ಲಾಭ-ನಷ್ಟದ ಚರ್ಚೆಗೆ ಒಳಪಟ್ಟರೆ ಇಲ್ಲಿ ಆತ್ಮ ವಿಶ್ವಾಸದಿಂದ ಮುನ್ನಡೆಯಬೇಕಾದ ಮನಸ್ಸುಗಳು ಮೊದಲಿಗೆ ಭಯ ಬೀಳುವುದು ಮೋಸ, ವಂಚನೆಯ ಬಲೆಗೆ ಸಿಲುಕಿ ಬಿಟ್ಟರೆ ಎಂದು.
ಯಾವ ಕ್ಷೇತ್ರವನ್ನೇ ಆರಿಸಿ ಕೊಂಡರೂ ಭ್ರಷ್ಟತೆ ಇಲ್ಲದ ವ್ಯವಸ್ಥೆ ಇಲ್ಲ. ಇದು ನಮ್ಮ ದೇಶಕ್ಕಂಟಿದ ಶಾಪವೇನೋ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಸಮೂಹ ಮಾಧ್ಯಮ. ಮೋಸ, ವಂಚನಾ ಪ್ರಕರಣಗಳನ್ನು ಬಯಲಿಗೆಳೆದು ಪರಿಸ್ಥಿತಿಯ ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತರೆ ಒಂದು ಹಂತಕ್ಕೆ ಪ್ರಯತ್ನ ಸಫಲವಾಗಬಹುದು. ಆದರೆ ಅಲ್ಲಿಯೂ ಇದೇ ಬಗೆಯ ಭ್ರಷ್ಟತೆಯ ಕರಿನೆರಳು! ನಂಬಿಕೆ, ವಿಶ್ವಾಸ, ಬದ್ಧತೆ ಇಲ್ಲದೆ ವೃತ್ತಿಧರ್ಮ ಕಳೆಗುಂದುತ್ತಿದೆ ಎಂದಾದರೆ ಬೇರೆಲ್ಲಿ ಪರಿಹಾರವನ್ನು ಹುಡುಕುವುದು? ಪ್ರತಿಭೆಗೆ, ಸೇವೆಗೆ ಸಲ್ಲಬೇಕಾದ ಗೌರವ, ಪ್ರಶಸ್ತಿ, ಸನ್ಮಾನ, ಪುರಸ್ಕಾರ, ಪದವಿ, ಹುದ್ದೆ, ಬಡ್ತಿ ಎಲ್ಲದರಲ್ಲಿಯೂ ನೈಜ ಅರ್ಹತೆಗಳು ನಗಣ್ಯವಾಗುತ್ತಿದ್ದು ವಾಮಮಾರ್ಗವೇ ಸೈ ಅನ್ನಿಸಿಕೊಳ್ಳುತ್ತಿದೆ ಎಂದಾದಲ್ಲಿ ನಿರಾಸೆಯ ಕಾರ್ಮೋಡ ಕವಿಯದಿರುತ್ತದೆಯೇ? ಅನುಮಾನ, ಸಂಶಯಗಳು ಎಷ್ಟರ ಮಟ್ಟಿಗೆ ಜನಮಾನಸದಲ್ಲಿ ಬೇರೂರಿ ಬಿಟ್ಟಿದೆ ಎಂದರೆ ಇವುಗಳನ್ನು ನ್ಯಾಯ ಮಾರ್ಗದಲ್ಲಿಯೇ ಗಳಿಸಿದರೂ, ಸಂಪಾದಿಸಿದರೂ ಪೂರ್ಣ ಪ್ರಮಾಣದಲ್ಲಿ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ.
ಮಾನವೀಯ ಸಂಬAಧಗಳಲ್ಲಿಯೂ, ಕೌಟುಂಬಿಕ ವಲಯದಲ್ಲಿಯೂ ಇದೇ ರೀತಿಯಲ್ಲಿ ಅನುಮಾನದ ಹುತ್ತ. ಆಸೆ, ಆಮಿಷಗಳಿಂದಲೇ ಇತರರನ್ನು ಒಲಿಸಿಕೊಳ್ಳುವ ಅಭ್ಯಾಸ ಮುಂದೆ ದೊಡ್ಡ ದೊಡ್ಡ ವಿಚಾರದಲ್ಲಿಯೂ ಅವ್ಯಾಹತವಾಗಿ ಮುಂದುವರಿಯುತ್ತದೆ. ಮಕ್ಕಳು ಸಣ್ಣ ಪ್ರಾಯದಲ್ಲಿಯೇ ಇಂತಹದರ ಬಲೆಗೆ ಬೀಳುತ್ತಾರೆ. ಬೀಳಿಸುವವರು ಹಿರಿಯರೆನಿಸಿಕೊಂಡವರು. ಪ್ರೀತಿಯ ವಿಚಾರದಲ್ಲಿ, ಮದುವೆಯ ವಿಚಾರದಲ್ಲಿ, ಎಲ್ಲೆಲ್ಲಿಯೂ ಇದರದ್ದೇ ಕಾರುಬಾರು. ಪ್ರೀತಿ ಪಾತ್ರರಿಗೆ ತೋರಿಸಬೇಕಾದ ಆಪ್ತ ಭಾವ ಹೇಗಿರಬೇಕು ಎಂದರೆ ಯಾವುದನ್ನೂ ಪ್ರತಿಯಾಗಿ ನಿರೀಕ್ಷೆ ಮಾಡದ ನಿರ್ಲಿಪ್ತತೆಯನ್ನು ಒಳಗೊಂಡಿರಬೇಕು. ಆ ಸಂಬAಧಗಳು ಯಾವತ್ತೂ ತನ್ನ ಬಣ್ಣವನ್ನು ಮಾಸದಂತೆ ಕಾಪಿಟ್ಟುಕೊಳ್ಳುತ್ತದೆ.
ಸಮಾಜದ ಅತ್ಯಂತ ಸಣ್ಣ ಘಟಕ ಕುಟುಂಬ. ಹಾಗಾಗಿ ಕೌಟುಂಬಿಕ ಮೌಲ್ಯಗಳು ಹೇಗೆ ಮನೆಯ ಸದಸ್ಯರ ಮೇಲೆ ತನ್ನ ಪ್ರಭಾವ ಬೀರಬಲ್ಲದೋ ಸಮಾಜ ಅದೇ ಮಾರ್ಗದಲ್ಲಿ ಮುನ್ನಡೆಯುತ್ತದೆ. ಹಾಗಾಗಿ ಭ್ರಷ್ಟ ಮನಸ್ಥಿತಿಯನ್ನು ಮೊದಲಿಗೆ ಅಂತ್ಯವಾಗಿಸಬೇಕು. ಅದು ಮೊಗ್ಗಿನ ಹಂತದಲ್ಲಿರುವಾಗಲೇ ನಡೆಯಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ನಮ್ಮಿಂದಲೇ, ನಮಗೋಸ್ಕರ, ನಾವೇ ನಮ್ಮ ನಮ್ಮೊಳಗೇ ನಡೆಸುತ್ತಿರುವ ಈ ದಬ್ಬಾಳಿಕೆಯನ್ನು ನಾವೇ ಕೊನೆಗಾಣಿಸಬಹುದೇ? ಉತ್ತರ ಕಷ್ಟವೇ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.