(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಡಿ. ೮: ೧೭ರ ವಯೋಮಿತಿಯ ೬೭ನೆ ರಾಷ್ಟçಮಟ್ಟದ ಹಾಕಿ ಪಂದ್ಯಾವಳಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಆಯೋಜಿಸಲ್ಪಡುತ್ತಿದ್ದು, ಈ ಬಾರಿಯ ರಾಷ್ಟಿçÃಯ ಪಂದ್ಯಾವಳಿಗೆ ಕೊಡಗು ಜಿಲ್ಲೆ ಆತಿಥ್ಯ ವಹಿಸುತ್ತಿದೆ.
ಕ್ರೀಡಾಜಿಲ್ಲೆ ಖ್ಯಾತಿಯ ಕೊಡಗಿನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಪಂದ್ಯಾವಳಿಗೆ ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ. ಜನವರಿ ೩ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಿಗೆಯ ಕ್ರೀಡಾ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ತಾ ೪ ರಿಂದ ೮ರ ತನಕ ಪಂದ್ಯಾಟ ಜರುಗಲಿದೆ. ಸುಮಾರು ೩೮ ರಿಂದ ೪೦ ಬಾಲಕಿಯರ ಹಾಕಿ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಪಂದ್ಯಾಟ ನಡೆಸಲಾಗುತ್ತಿದೆ.
ಕೂಡಿಗೆಯ ಸರಕಾರಿ ಕ್ರೀಡಾಶಾಲೆ, ಮಡಿಕೇರಿಯ ಸಾಯಿ ಟರ್ಫ್ ಮೈದಾನ, ಸೋಮವಾರಪೇಟೆಯ ಟರ್ಫ್ ಕ್ರೀಡಾಂಗಣ ಹಾಗೂ ಪೊನ್ನಂಪೇಟೆಯ ಟರ್ಫ್ ಕ್ರೀಡಾಂಗಣದಲ್ಲಿ ಈ ಪಂದ್ಯಾಟ ಆಯೋಜಿಸಲಾಗುತ್ತಿದೆ. ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಈ ಕ್ರೀಡಾಕೂಟಕ್ಕೆ ಆಯೋಜಕರೊಂದಿಗೆ ಸಹಕರಿಸುತ್ತಿದ್ದು, ಜಿಲ್ಲಾಡಳಿತವೂ ಅಗತ್ಯ ಸಿದ್ಧತೆ ನಡೆಸಿದೆ.
(ಮೊದಲ ಪುಟದಿಂದ) ಈಗಾಗಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಒಂದೆರಡು ಪೂರ್ವಭಾವಿ ಸಭೆಯನ್ನೂ ನಡೆಸಿದ್ದು, ಅಗತ್ಯತೆಗಳ ಕುರಿತು ಚರ್ಚಿಸಲಾಗಿದೆ.
ಜಿಲ್ಲೆಯ ಎಲ್ಲಾ ಭಾಗದ ಕ್ರೀಡಾಪ್ರೇಮಿಗಳನ್ನು ಸೆಳೆಯುವ ಉದ್ದೇಶದೊಂದಿಗೆ ನಾಲ್ಕು ಕಡೆಗಳಲ್ಲಿ ಹಾಕಿ ಹಬ್ಬದಂತೆ ಪಂದ್ಯಾವಳಿಯನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಆರಂಭದ ಎರಡು ದಿನಗಳು ಲೀಗ್ ಮಾದರಿಯಲ್ಲಿ ಪ್ರತಿ ಮೈದಾನದಲ್ಲಿ ನಿಗದಿತ ಪಂದ್ಯಾಟ ನಡೆಯಲಿದೆ. ನಂತರ ನಾಕೌಟ್ ಪಂದ್ಯಾಟ ಜರುಗಲಿದ್ದು, ೮ ತಂಡಗಳು ನಾಕೌಟ್‌ನಲ್ಲಿ ಸೆಣಸಲಿವೆ.
ಸುಮಾರು ೮೪೦ ಕ್ರೀಡಾಪಟುಗಳು, ೪೦ ರಿಂದ ೫೦ ತೀರ್ಪುಗಾರರು, ೨೦ ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಅತಿಥಿಗಳನ್ನು ಒಳಗೊಂಡAತೆ ೯೫೦ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ ಬಸವನಹಳ್ಳಿ, ಕೂಡಿಗೆ, ಕುಶಾಲನಗರ, ತೋಳೂರುಶೆಟ್ಟಳ್ಳಿ, ತಿತಿಮತಿ, ಪೊನ್ನಂಪೇಟೆ, ಮಡಿಕೇರಿ ಸೇರಿದಂತೆ ವಿವಿಧ ವಿದ್ಯಾರ್ಥಿ ನಿಲಯಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ಬಳಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ.
ಎಷ್ಟು ರಾಜ್ಯಗಳ ತಂಡಗಳು ಭಾಗಿಯಾಗಲಿವೆ ಎಂಬದು ಸದ್ಯದಲ್ಲಿ ಖಚಿತವಾಗಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಒಂದೆರಡು ಪೂರ್ವಭಾವಿ ಸಭೆಗಳು ನಡೆದಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಅವರು ಮಾಹಿತಿ ನೀಡಿದ್ದಾರೆ.