ಬೆಳೆ ಉಳಿಸಿಕೊಳ್ಳಲು ಹರಸಾಹಸ

ಸುಂಟಿಕೊಪ್ಪ, ಡಿ. ೮: ಸುಂಟಿಕೊಪ್ಪ ವ್ಯಾಪ್ತಿಯ ಕೆಲ ತೋಟಗಳಲ್ಲಿ ಇದೀಗ ವಾನರ ಸೈನ್ಯ ಲಗ್ಗೆಯಿಟ್ಟು ಫಸಲು ನಾಶಪಡಿಸುತ್ತಿದೆ. ಉಲುಗುಲಿ ಮಹಾಲಕ್ಷಿö್ಮ, ಅತ್ತೂರು ತೋಟಗಳಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಂಗಗಳು ಬೀಡುಬಿಟ್ಟರೆ ಬಹುತೇಕ ತೋಟಗಳಲ್ಲಿ ಕಾಫಿ ಹಣ್ಣನ್ನು ತಿಂದು ತೇಗುತ್ತಿದ್ದು, ಈ ಭಾಗದ ಕೃಷಿಕರು ಆತಂಕಗೊAಡಿದ್ದಾರೆ.

ಈಗಾಗಲೇ ಕಾಡಾನೆ ದಾಳಿಯಿಂದ ಬಹುತೇಕ ತೋಟಗಳು ನಾಶಗೊಂಡಿದ್ದು, ಸ್ವಲ್ಪ ಚೇತರಿಸಿಕೊಳ್ಳುವಾಗ ಮತ್ತೆ ವಾನರ ದಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಫಸಲನ್ನು ನಾಶಪಡಿಸುತ್ತಿವೆ. ಮರದಿಂದ ಮರಕ್ಕೆ ಜಿಗಿಯುತ್ತಾ, ಮೆಣಸಿನ ಬಳ್ಳಿಗಳಲ್ಲಿ ಜೋಕಾಲಿ ಆಡುತ್ತಾ, ತೋಟದಲ್ಲಿ ಬೆಳೆದ ಫಸಲನ್ನು ನಾಶಪಡಿಸುತ್ತಿದೆ. ಈಗಾಗಲೇ ಕಾಫಿ ಕೊಯ್ಯುವ ಸಮಯವಾಗಿದ್ದು, ಒಂದೆಡೆ ಬಿಸಿಲು ಇಲ್ಲದೆ ಕೊಯ್ದ ಕಾಫಿಯನ್ನು ಒಣಗಿಸಲು ಹರಸಾಹಸಪಡುತ್ತಿರುವ ಬೆಳೆಗಾರರು, ಮಂಗಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಪರದಾಡುವ ಸ್ಥಿತಿಯಲ್ಲಿದ್ದಾರೆ.

ಅಲ್ಲದೆ, ತೋಟದ ಲೈನ್‌ಮನೆಯಲ್ಲಿ ಬೆಳೆದ ಫಲಭರಿತ ವಸ್ತುಗಳನ್ನು ಹಾಳುಗೆಡಹುತ್ತಿವೆ. ಕಾಫಿ ಬೆಳೆಗಾರರು ವನ್ಯ ಪ್ರಾಣಿಗಳ ದಾಂಧಲೆಯಿAದಾಗಿ ವರ್ಷವಿಡೀ ಹಣ ವ್ಯಯ ಮಾಡಿ ಬೆಳೆದ ಫಸಲು ಕೈಗೆ ಬಂದದ್ದು ಬಾಯಿಗೆ ಬಾರದ ಸ್ಥಿತಿ ಒದಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿರುವರು. -ರಾಜು ರೈ