ಶ್ರೀಮಂಗಲ, ಡಿ. ೮: ಕೊಡವ ಸಾಹಿತ್ಯ ಲೋಕದ ಪ್ರತಿಷ್ಠಿತ ಸ್ವಯಂ ಸೇವಾ ಸಂಸ್ಥೆ ಎಂಬ ಖ್ಯಾತಿ ಹೊಂದಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಕೊಡವ ಸಾಹಿತ್ಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಪೈಕಿ ದತ್ತಿನಿಧಿ ಕಾರ್ಯಕ್ರಮವೂ ಒಂದಾಗಿದ್ದು, ಕೈಬಿಲೀರ ಪಾರ್ವತಿ ಬೋಪಯ್ಯರವರು ಅವರ ಪತಿ ದಿವಂಗತ ಬೋಪಯ್ಯ ಅವರ ಜ್ಞಾಪಕಾರ್ಥ ಕೊಡವ ತಕ್ಕ್ ಎಳ್ತ್ಕಾರಡ ಕೂಟದಲ್ಲಿ ಸ್ಥಾಪಿಸಿರುವ ದತ್ತಿನಿಧಿ ಯೋಜನೆಯಡಿ ಕೊಡವ ಭಾಷೆಯ ಸಣ್ಣ ಕಥೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಲೇಖಕರು ೨೦೦ ಶಬ್ದಗಳಿಗೆ ಒಳಪಟ್ಟಂತೆ ತಾವೇ ಸಣ್ಣ ಕಥೆಯನ್ನು ಬರೆಯಬೇಕು.

ದಿವಂಗತ ಇಟ್ಟೀರ ರಾಜಪ್ಪ ಅವರ ಜ್ಞಾಪಕಾರ್ಥ ಅವರ ಕುಟುಂಬದವರು ಕೂಟದಲ್ಲಿ ಸ್ಥಾಪಿಸಿರುವ ದತ್ತಿನಿಧಿ ಯೋಜನೆಯಡಿ ಕೊಡವ ಭಾಷೆಯಲ್ಲಿ ಚುಟುಕ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಲೇಖಕರು ಸ್ವರಚಿತ ನಾಲ್ಕು ಗೆರೆಗಳ ಎರಡು ಚುಟುಕಗಳನ್ನು ಬರೆಯಬೇಕು.

ವಯಸ್ಸು, ಜಾತಿ, ಧರ್ಮಗಳ ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ಭಾಗವಹಿಸಲು ಅವಕಾಶವಿರುವ ಈ ಎರಡು ಲೇಖನ ಸ್ಪರ್ಧೆಗಳಲ್ಲಿ ಲೇಖಕರು ಕೊಡವ ಭಾಷೆಯಲ್ಲಿ ಬರೆದ ಸಣ್ಣ ಕಥೆ ಹಾಗೂ ಚುಟುಕಗಳನ್ನು ತಾ. ೧೨ರ ಒಳಗೆ ೯೪೪೮೩೨೬೦೧೪ ಅಥವಾ ೯೪೪೯೯೯೮೭೮೯ ಮೊಬೈಲ್ ಸಂಖ್ಯೆಗೆ ವಾಟ್ಸಾö್ಯಪ್ ಮುಖಾಂತರ ಕಳುಹಿಸಬಹುದು. ಆಯ್ಕೆಯಾದ ಉತ್ತಮ ಸಣ್ಣ ಕಥೆಗಳಿಗೆ ಹಾಗೂ ಚುಟುಕಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನಗಳನ್ನು ನೀಡಲಾಗುವುದು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೇಲ್ಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.